ಸೋಮವಾರ, ಅಕ್ಟೋಬರ್ 19, 2015

ಮನಸ್ಸಿನಿಂದ ನಿರೋಧಕ ಶಕ್ತಿ ನಿಯಂತ್ರಣ  * ಚಳಿಯಲ್ಲಿ ದೇಹ ಬೆಚ್ಚಗಿಟ್ಟುಕೊಳ್ಳೋ ತಂತ್ರ  * ರೋಗ ನಿರೋಧಕವನ್ನೂ ನಿಯಂತ್ರಿಸಬಹುದು

ಮನೋಸಿದ್ಧಿಗಿದೆ ಅಪಾರ ಶಕ್ತಿ !
ಟಿಬೆಟ್ ನಿಮಗೆ ಗೊತ್ತಿರಲೇಬೇಕಲ್ಲ. ಹಿಮಾಚ್ಛಾದಿತ ಪರ್ವತ ಶ್ರೇಣಿಗಳಲ್ಲಿರುವ ನಾಡು. ಅಲ್ಲಿರುವ ಬೌದ್ಧ ಸನ್ಯಾಸಿಗಳು ಮತ್ತು ಯೋಗಿಗಳು ಯೋಗಕ್ರಿಯೆಯ  ಕೆಲ ವಿಶೇಷ ತಂತ್ರಗಳನ್ನು ಕರಗತ ಮಾಡಿಕೊಂಡಿರುತ್ತಾರೆ, ಅದುವೇ  ತುಮ್ಮೋ ತಂತ್ರ. ಅಂದರೆ ಎಲುಬು ಕೊರೆಯುವ 
ಚಳಿಯಲ್ಲೂ ದೇಹವನ್ನು ಬೆಚ್ಚಗಿಟ್ಟುಕೊಳ್ಳುವ ತಂತ್ರವದು. ಬಟ್ಟೆ ಇಲ್ಲದೇ ಕೊರೆಯುವ ಚಳಿಯಲ್ಲಿ  ಗಂಟೆಗಟ್ಟಲೆ ಕುಳಿತು ಧ್ಯಾನಿಸುತ್ತಾರೆ, ಹಿಮಪಾತದ ಸಂದರ್ಭದಲ್ಲೂ ನಿರಾಯಾಸವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ಇದು ಹೇಗೆ ಸಾಧ್ಯ? 
ಈ ಪ್ರಶ್ನೆಯನ್ನು ಹುಡುಕಿಕೊಂಡು ಹೊರಟ ವಿಜ್ಞಾನಿಗಳಿಗೆ ವಿಸ್ಮಯಕಾರಿ ಸಂಗತಿ ಅರಿವಿಗೆ ಬಂದಿತು . ಅದೇನೆಂದರೆ, ಮನುಷ್ಯ ಗಟ್ಟಿ ಮನಸ್ಸು ಮಾಡಿದರೆ, ದೇಹದಲ್ಲಿನ ತನ್ನ ನಿರೋಧಕ ಪ್ರತಿಕ್ರಿಯೆ (ಇಮ್ಯೂನ್ ರೆಸ್ಪಾನ್ಸಸ್) ಶಕ್ತಿಯನ್ನು ಪ್ರಜ್ಞಾಪೂರ್ವಕವಾಗಿಯೇ  ನಿಯಂತ್ರಿಸಿಕೊಳ್ಳಬಹುದು. ಚಳಿಯಲ್ಲಿ ದೇಹವನ್ನು ಬಾಹ್ಯ ವಸ್ತುಗಳ ನೆರವಿಲ್ಲದೆ ಬೆಚ್ಚಗಿಟ್ಟುಕೊಳ್ಳುವುದರ ಜೊತೆಗೆ ಬಿರು ಬೇಸಿಗೆಯಲ್ಲಿ  ದೇಹವನ್ನು ತಂಪಾಗಿಯೂ ಇಟ್ಟುಕೊಳ್ಳಬಹುದು.
ಸಂಶೋಧಕರು ದೇಹದೊಳಗಿನ  ಈ ವಿಚಿತ್ರ, ಸ್ವತಂತ್ರ  ವರ್ತನೆಯನ್ನು ಅಧ್ಯಯನ ಮಾಡಲು ಮುಂದಾಗಿದ್ದು ವಿಮ್ ಹಾಫ್ ವಿಧಾನದ ಮೂಲಕ. ಯಾವುದೇ ವ್ಯಕ್ತಿ ನಿರೋಧಕ ಪ್ರತಿಕ್ರಿಯಾತ್ಮಕ ಶಕ್ತಿಯ ತಂತ್ರವನ್ನು ಮನಸ್ಸು ಮಾಡಿದರೆ ಕರಗತ ಮಾಡಿಕೊಳ್ಳಬಹುದು ಎನ್ನುತ್ತದೆ ವಿಮ್ ಹಾಫ್ ವಿಧಾನ.

ಏನಿದು ವಿಮ್ ಹಾಫ್ ವಿಧಾನ?
ವಿಮ್ ಹಾಫ್ ಡಚ್ ಮೂಲದ ವ್ಯಕ್ತಿ.
 ಈತ ಎಂತದ್ದೇ ಚಳಿಯನ್ನು ಸಹಿಸಿಕೊಳ್ಳುವ ವಿಶಿಷ್ಟ  ಶಕ್ತಿ ಹೊಂದಿರುವ ವ್ಯಕ್ತಿ. ಈ ಕಾರಣಕ್ಕೇ ಈತ ವಿಶ್ವ ದಾಖಲೆ ಮಾಡಿದ್ದಾನೆ. ‘ದಿ ಐಸ್ ಮ್ಯಾನ್’ ಎಂಬ ಅಡ್ಡ ಹೆಸರಿನಿಂದಲೂ ಕರೆಯುತ್ತಾರೆ.
ನೆದರ್ಲೆಂಡಿನ ನಿಜ್ಮೆಗೆನ್‌ನಲ್ಲಿರುವ ರಾಡ್ಬೌಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ಮಥಿಜಿಸ್ ಕಾಕ್ಸ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಿದರು. ಈ ಅಧ್ಯಯನದ ವಿಧಾನ ಟಿಬೆಟ್ಟಿನ  ತುಮ್ಮೊ ತಂತ್ರಕ್ಕೆ ಸಮಾನಾಂತರವಾಗಿತ್ತು. ಇದರಲ್ಲಿ ಮೂರನೇ ಕಣ್ಣಿನ ಧ್ಯಾನ ಕ್ರಮ, ಪ್ರಾಣಾಯಾಮವೂ ಒಳಗೊಂಡಿತ್ತು. ವಿಜ್ಞಾನಿಗಳು 12 ಮಂದಿಗೆ ಈ ಸಂಬಂಧ ತರಬೇತಿ ನೀಡಿದರು . ಆಂತರಿಕ ಬಿಸಿಯ ಬೇಗೆಯನ್ನು ನಿವಾರಿಸುವ ಕ್ರಮ ಹೇಳಿಕೊಡಲಾಯಿತು.
ಅಧ್ಯಯನದ ಚೌಕಟ್ಟಿನಲ್ಲಿ ಒಟ್ಟು 24 ಮಂದಿ ಒಳಪಟ್ಟಿದ್ದರು. ಆ ಪೈಕಿ 12 ಮಂದಿ ವಿಮ್ ಹಾಫ್ ತಂತ್ರವನ್ನು ತರಬೇತಿ ಪಡೆದವರು. ಉಳಿದ 12 ಮಂದಿಗೆ ಅದರ ಸುಳಿವೇ ಇರಲಿಲ್ಲ. ಈ ಎರಡೂ ವರ್ಗಗಳಿಗೆ ವಿಜ್ಞಾನಿಗಳು ಫ್ಲೂ ರೀತಿಯ ಲಕ್ಷಣಗಳನ್ನು ಪ್ರಚೋದಿಸುವ ಗುಣವುಳ್ಳ ಬ್ಯಾಕ್ಟಿರಿಯಾಗಳನ್ನು ದೇಹಕ್ಕೆ ಸೇರಿಸಿದರು. ಇದರ ಫಲಿತಾಂಶ ಸ್ವಾರಸ್ಯಕರವಾಗಿತ್ತು. ಹಾಫ್ ವಿಧಾನದ ತರಬೇತಿ ಪಡೆದವರಲ್ಲಿ ಫ್ಲೂ ರೀತಿಯ ಲಕ್ಷಣಗಳು ತೀರಾ ಗೌಣವೆನಿಸುವ ಮಟ್ಟದಲ್ಲಿತ್ತು. ತರಬೇತಿ ಪಡೆಯದವರ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಅಷ್ಟೇ ಅಲ್ಲ ತರಬೇತಿ ದೇಹದಲ್ಲಿ ಜ್ವಲನಕಾರಿ ಸೃಷ್ಟಿ ಮಾಡುವ ಪ್ರೋಟಿನ್ ಅಲ್ಪ ಪ್ರಮಾಣದಲ್ಲಿ ಸೃಷ್ಟಿಯಾಗಿತ್ತು. (ಅಧಿಕ ಪ್ರಮಾಣದ ಇಂಟರ್‌ಲ್ಯೂಕಿನ್-10 ಜ್ವಲನಕಾರಿ ವಿರುದ್ಧ ಹೋರಾಡುವ ಪ್ರೋಟಿನ್). 
ಇಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ಸಂಗತಿ ಎಂದರೆ, ಸ್ವಾಯತ್ತ ನರಮಂಡಲ ವ್ಯವಸ್ಥೆ ಮತ್ತು ಅಂತರ್ಜನ್ಯ ನಿರೋಧಕ ವ್ಯವಸ್ಥೆಗಳೆರಡರ ಮೇಲೂ ಐಚ್ಛಿಕವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬುದಾಗಿತ್ತು. ಹೊಸ ಅಧ್ಯಯನದಿಂದ ವ್ಯಕ್ತವಾಗಿರುವ ಸಂಗತಿ ಎಂದರೆ, ಈ ವಿಶೇಷ ತಂತ್ರಗಳನ್ನು ತರಬೇತಿ ಮೂಲಕ  ಕರಗತ ಮಾಡಿಕೊಂಡರೆ ಅನುವೇದಿಕ ನರಮಂಡಲ ವ್ಯವಸ್ಥೆ ಮತ್ತು ನಿರೋಧಕ ವ್ಯವಸ್ಥೆಗಳರಡರ ಮೇಲೂ ಐಚ್ಛಿಕವಾಗಿ ಪ್ರಭಾವ ಬೀರಬಹುದು.
ಆದರೆ, ಸಂಪ್ರದಾಯಬದ್ಧ ನರವ್ಯೂಹ ತಜ್ಞರು  ಮತ್ತು ನಿರೋಧಕಜ್ಞರು ಈ ಅಧ್ಯಯವನ್ನು ಅಷ್ಟು ಸುಲಭದಲ್ಲಿ ಒಪ್ಪಲು ತಯಾರಿಲ್ಲ. ಅವರಲ್ಲಿ ತಾತ್ವಿಕ ಸಂದೇಹಗಳಿದ್ದವು . ಅಷ್ಟು ಸುಲಭದಲ್ಲಿ ಒಪ್ಪಲು ತಯಾರಿಲ್ಲ. ಒಂದಕ್ಕೊಂದು ತಲೆಬುಡ ಇಲ್ಲದ  ಸಂಬಂಧ ಕಲ್ಪಿಸಲು ಇದೊಂದು ಅದ್ಭುತ ಅಧ್ಯಯನ ಎಂದೂ ವ್ಯಂಗ್ಯವಾಡಿದ್ದಾರೆ. 
 ಸುಪ್ತ ಪ್ರಜ್ಞೆ ಪ್ರಭಾವ
ಅಷ್ಟಕ್ಕೂ ನಿರೋಧ ವ್ಯವಸ್ಥೆಯನ್ನು ಮನಸ್ಸು ನಿಯಂತ್ರಿಸುವ ಬಗ್ಗೆ ಇದೊಂದೇ ಪ್ರಥಮ ಅಧ್ಯಯನವಲ್ಲ. ಆಸ್ಟ್ರೇಲಿಯಾ ವಿಜ್ಞಾನಿಗಳು ಇಂತಹದ್ದೊಂದು ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಅಲರ್ಜಿಕ್ ಪ್ರತಿಕ್ರಿಯೆಯ ಪ್ರಮಾಣದ ಮೇಲೆ ಸುಪ್ತ ಪ್ರಜ್ಞೆ ಪ್ರಭಾವ ಬೀರುವ ಸಾಮರ್ಥ್ಯ ಪಡೆದಿದೆ ಎಂಬ ನಿರ್ಣಯಕ್ಕೆ ಬಂದಿದ್ದರು.
ಇವೆರಡೂ ಸಂಶೋಧನೆಗಳಿಂದ ವ್ಯಕ್ತವಾಗುವ ವಿಚಾರವೆಂದರೆ, ನಿರೋಧಕ ವ್ಯವಸ್ಥೆಯನ್ನು ಪ್ರಜ್ಞಾಪೂರ್ವಕವಾಗಿ ಹಲವು ವಿಧಾನಗಳಿಂದ ಪ್ರಭಾವ ಬೀರಬಹುದಾಗಿದೆ.  ಹೀಗಾಗಿ ನೀವು ಮನಸ್ಸು ಮಾಡಿದರೆ ನಿಮ್ಮ ಆರೋಗ್ಯ ಮತ್ತು ನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ಜೀವನದ ಧನಾತ್ಮಕ  ಅಂಶಗಳ ಬಗ್ಗೆಯೇ ಗಮನವನ್ನು ಕೇಂದ್ರೀಕರಿಸಿ, ನೀವು ಆನಂದವಾಗಿ, ಐಶ್ವರ್ಯಯುತರಾಗಿದ್ದೀರಿ ಎಂದು ದೃಢವಾಗಿ ಭಾವಿಸಿ, ಆ ಕುರಿತು ಪ್ರತಿ ದಿನವೂ ಧ್ಯಾನಿಸಿ. ಕೆಲವೇ ದಿನಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಇದು ಆರೋಗ್ಯ ಮಾತ್ರವಲ್ಲ ಇಡೀ ಜೀವನವನ್ನೇ ಬದಲಾಯಿಸಬಲ್ಲದು.
ಧ್ಯಾನದಲ್ಲಿ ಇಂತಹ  ಸ್ಥಿತಿ ತಲುಪಲು ಸಾಧ್ಯ. ಇದರಲ್ಲಿ ಗಿಮಿಕ್ ಇಲ್ಲ !  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ