ಶುಕ್ರವಾರ, ಅಕ್ಟೋಬರ್ 23, 2015

ಬದುಕಿನ ಮಹಾಗುರು ಶ್ರೀಕೃಷ್ಣ
-----------
ಕೃಷ್ಣ ಅಂದ್ರೆ ಖುಷಿ
----------
ಕ್ಕಳು ಮತ್ತು ಯುವ ಜನತೆ, ಮಹಿಳೆಯರೆನ್ನದೆ ಎಲ್ಲರನ್ನೂ ಗಾಢವಾಗಿ ಪ್ರಭಾವಿಸುವ ವ್ಯಕ್ತಿತ್ವ ಎಂದರೆ ಶ್ರೀಕೃಷ್ಣನದ್ದು. ಆತನ ಬಾಲ್ಯಲೀಲೆ, ಯೌವ್ವನದ ಸಾಹಸಕ್ಕೆ  ಮರುಳಾಗದವರು ಯಾರು? ಕೃಷ್ಣನ ಬಾಲ್ಯ, ಯೌವ್ವನ, ಆನಂತರದ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಅನುಕರಣೀಯ. ಸಾಹಸ, ಸ್ನೇಹ, ಶಿಕ್ಷಣ, ಸ್ಫೂರ್ತಿಯುತ ಜೀವನ ಪ್ರೀತಿ, ಮಹಾಭಾರತದ ಸಂದರ್ಭದ ರಾಜನೀತಿ, ಗೀತೆಯ ಬೋಧನೆಗಳೆಲ್ಲ ಇಂದಿಗೂ ಅನುಕರಣೀಯ. ಕೃಷ್ಣನಿಂದ ಸ್ಫೂರ್ತಿ ಪಡೆದವರು, ಪಡೆಯುತ್ತಿರುವವರು ಭಾರತೀಯರು ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಗಳಲ್ಲೂ ಇದ್ದಾರೆ. ಎಲ್ಲರನ್ನೂ ಸೆಳೆದುಕೊಳ್ಳುವ ವ್ಯಕ್ತಿತ್ವ ಆತನದ್ದು. ದೈವತ್ವವನ್ನು ಹೊರತುಪಡಿಸಿ ನೋಡಿದರೂ, ಸಾಧಾರಣ ಮಾನವನಾಗಿ ಆತ ಜಗತ್ತಿಗೆ ತೋರಿಸಿದ ದಾರಿದೀಪ ಯುಗಯುಗ  ಕಳೆದರೂ ಬೆಳಗುತ್ತಲೇ ಇರುವುದು. 

ಕೃಷ್ಣ ಅಂದ್ರೆ ಸ್ಫೂರ್ತಿ

ಶ್ರೀಕೃಷ್ಣನ ಅವತಾರವೇ ಒಂದು ಸ್ಫೂರ್ತಿ. ಧರೆಯಲ್ಲಿ ರಾಕ್ಷಸಿ ವ್ಯಕ್ತಿತ್ವ, ಗುಣಗಳ ವಿಜೃಂಭಣೆಯ ಕಾಲಘಟ್ಟದಲ್ಲಿ ಕೃಷ್ಣನ ಜನನ. ಈತನ ಜನನದ ಸಮಾಚಾರವೇ ಮಾವ ಕಂಸನಲ್ಲಿ ನಡುಕ ಹುಟ್ಟಿಸಿತ್ತು. ಎಳೆವೆಯಲ್ಲೇ ಹೊಸಕಿ ಹಾಕಲು ಬಹಳಷ್ಟು ಪ್ರಯತ್ನಪಟ್ಟ. ಆದರೆ ಅದು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೂ ಬೃಂದಾವನ, ಗೋಕುಲ ಎಲ್ಲೆಲ್ಲಿ ಕೃಷ್ಣ ಇದ್ದನೋ ಅಲ್ಲಿ ಸ್ಫೂರ್ತಿಯ ಚಿಲುಮೆ ಚಿಮ್ಮುತ್ತಿತ್ತು. ಕಂಸ ಮತ್ತು ಆತನ ಸಹಚರರ ಭೀತಿಯ ವಾತಾವರಣದ ಮಧ್ಯೆಯೂ ಕೃಷ್ಣನ ನಿರ್ಭೀತಿ, ನ್ಯಾಯಪರತೆ, ದುಷ್ಟರಿಗೆ ಶಿಕ್ಷೆ ಇವೆಲ್ಲಕ್ಕಿಂತ ಮಿಗಿಲಾಗಿ ಚೇತೋಹಾರಿ ಬದುಕು ಮನಕುಲಕ್ಕೆ ಸ್ಫೂರ್ತಿ. ಜೀವನದ ಉದ್ದಕ್ಕೂ ಆತ ಹಲವರಿಗೆ ಸ್ಫೂರ್ತಿಯಾಗುತ್ತಲೇ ನಡೆದ. ವಿರೋಧಿಗಳೆನಿಸಿಕೊಂಡವರು ಕೂಡ ಕೃಷ್ಣನನ್ನು ಮನದಲ್ಲೇ ನಮಿಸುವಷ್ಟು, ಭಜಿಸುವಷ್ಟು ಸ್ಫೂರ್ತಿಯನ್ನು ನೀಡಿದ್ದ. ಪಾಂಡವರಲ್ಲದೆ, ಭೀಷ್ಮ, ದ್ರೋಣ, ಸಂಜಯ ಮುಂತಾದವರು ವಿರೋಧ ಪಾಳೆಯದಲ್ಲಿದ್ದರೂ, ಅವರ ಮನಸ್ಸಿನಲ್ಲಿ ಕೃಷ್ಣನೇ ಮೂಡುತ್ತಿದ್ದ. ಬೃಂದಾವನವೆಂಬ ಇಡೀ ಹಳ್ಳಿಯ ಜನರನ್ನು ಪ್ರಭಾವಿಸಿದ್ದ. ಮಕ್ಕಳು -ದೊಡ್ಡವರು, ಹೆಂಗಸರು- ಗಂಡಸರು ಎಂಬ ತಾರತಮ್ಯವಿರಲಿಲ್ಲ. ನಡೆ, ನುಡಿ, ಆಚಾರ, ಆಚರಣೆ ಎಲ್ಲದರಲ್ಲೂ ಉನ್ನತ ಮೌಲ್ಯ ತುಂಬಿರುತ್ತಿತ್ತು. ದೋಷಗಳಿಗೆ ಎಡೆಯೇ ಇರುತ್ತಿರಲಿಲ್ಲ. ಆ ಸ್ಫೂರ್ತಿ, ಆದರ್ಶ ಅಂದಿಗೆ ಮಾತ್ರವಲ್ಲ ಇಂದಿನ ಪೀಳಿಗೆಗೂ ಸಕಾಲಿಕ. ಇಂದಿಗೂ ಪ್ರತಿ ಅಮ್ಮ ತನ್ನ ಮಗನನ್ನು ಒಂದಲ್ಲ ಒಂದು ಬಾರಿ ಕೃಷ್ಣನಿಗೆ ಹೋಲಿಸುತ್ತಾಳೆ. ಮಗನಲ್ಲಿ ಕೃಷ್ಣನನ್ನು ಕಾಣುವ ತಾಯಿಯ ಸಂಭ್ರಮ ಯಾವ ಸ್ಫೂರ್ತಿಗೂ ಕಡಿಮೆಯಲ್ಲ. 

ಗೆಳೆಯ ಅಂದ್ರೆ ಹೀಗಿರ‌್ಬೇಕು

ಶ್ರೀಕೃಷ್ಣನ ಬಾಲ್ಯದ ಕಥೆ ಬಹಳ ರೋಚಕ. ಕೃಷ್ಣನ ಕಥೆಯ ಮುಂದೆ ಹ್ಯಾರಿಪಾಟರ್ ಕಥೆಯೂ ಸಪ್ಪೆ. ಈ ಕಥೆಗಳಲ್ಲಿ ವಿಶೇಷವಾಗಿ ಗೆಳೆತನದ ಎಳೆಯೂ ಬರುತ್ತದೆ. ಬಾಲ್ಯದಲ್ಲಂತೂ ಸ್ನೇಹಿತರ ಹಿಂಡನ್ನು ಕಟ್ಟಿಕೊಂಡೇ ಓಡಾಡುವ ಕೃಷ್ಣ ಮುಂದೆ ದ್ವಾರಕಾಧೀಶನಾದ ಬಳಿಕವೂ ಬಾಲ್ಯದ ಗೆಳೆಯರನ್ನು ಮರೆಯುವುದಿಲ್ಲ. ಅದಕ್ಕೆ ಇಂದಿಗೂ ಜನಪ್ರಿಯವಾಗಿರುವ ಕಥೆ ಎಂದರೆ ಕೃಷ್ಣ- ಕುಚೇಲರದ್ದು. ಸ್ನೇಹಿತರೆಂದರೆ ಹೇಗಿರಬೇಕು? ಕೃಷ್ಣ- ಕುಚೇಲರ ಹಾಗಿರಬೇಕು ಎಂಬ ಮಾತೇ ಬೆಳೆದು ಬಂದಿದೆ. ಕುಚೇಲನನ್ನು ಸುದಾಮ ಎಂದೂ ಕರೆಯುತ್ತಾರೆ. ಶ್ರೀಕೃಷ್ಣ ಗುರು ಸಾಂದೀಪಿನಿಯ ಬಳಿ ವಿದ್ಯೆ ಕಲಿಯುವಾಗ ಸುದಾಮ ಆತನ ಸಹಪಾಠಿ. ಹಿಂದಿನ ಕಾಲದಲ್ಲಿ ಗುರುಕುಲಗಳಲ್ಲಿ ದೊಡ್ಡ ರಾಜನ ಮಗ ಆಗಲಿ, ಬಡವರ ಮಕ್ಕಳಾಗಲಿ ಗುರುಕುಲದಲ್ಲಿಯೇ ಕಲಿಯಬೇಕಿತ್ತು. ಬಡವ- ಧನಿಕ ಎಂಬ ವ್ಯತ್ಯಾಸ ಇರುತ್ತಿರಲಿಲ್ಲ. ಆಟ, ಊಟ, ಪಾಠದ ಜೊತೆಗೆ ಸಮಾನ ಗುಣ, ಸಮಾನ ಅಭಿರುಚಿಯಿಂದ ಕೃಷ್ಣ-ಸುದಾಮರ ಮಧ್ಯೆ ಗಾಢ ಸ್ನೇಹ. ಗುರುಕುಲ ವಾಸ ಮುಗಿಸಿ ಹೊರಡುವಾಗ ‘ಬದುಕಿರುವವರೆಗೂ ಸ್ನೇಹ ಮರೆಯದೇ ಇರೋಣ’ ಎಂಬುದಾಗಿ ಮಾತನಾಡಿಕೊಂಡರು. ಸುದಾಮ ಘನ ಪಂಡಿತನಾದರೂ ಕಡು ಬಡತನದ ಜೀವನ  ಸಾಗಿಸುತ್ತಿದ್ದ. ಒಮ್ಮೆ ಹೆಂಡತಿ ‘ಕೃಷ್ಣ ಅಷ್ಟು ಗೆಳೆಯ ಎನ್ನುತ್ತೀರಲ್ಲ, ನಮ್ಮ ಕಷ್ಟ ನಿವಾರಿಸಿಕೊಳ್ಳಲು ಆತನ ಬಳಿ ಹೋಗಿ’ ಎಂದು ತಾಕೀತು ಮಾಡುತ್ತಾಳೆ. ಗೆಳೆಯನ ಬಳಿ ಹೋಗುವಾಗ ಬರಿಗೈಲಿ ಹೋಗಬಾರದು ಎಂದು ಒಂದು ಹಿಡಿ ಅವಲಕ್ಕಿಯನ್ನು ಅವಳು ಕಳಿಸುತ್ತಾಳೆ. ಹರುಕು ಪಂಚೆಯಲ್ಲೇ ಅವಲಕ್ಕಿ  ಕಟ್ಟಿಕೊಂಡು ಬರುತ್ತಾನೆ ಸುದಾಮ. ಹಾಗೆ ಬಂದ ಗೆಳೆಯನನ್ನು ದೂರದಿಂದಲೇ ಗುರುತಿಸಿ, ರುಕ್ಮಿಣಿಯೊಂದಿಗೆ ಒಡಗೂಡಿ ಬಂದು ಆದರಿಸಿ, ಬರಮಾಡಿಕೊಂಡು ಸತ್ಕರಿಸುತ್ತಾನೆ ಕೃಷ್ಣ. ಗೆಳೆಯನನ್ನು ತಬ್ಬಿಕೊಂಡು ಕುಣಿದಾಡುತ್ತಾನೆ. ಈ ಕಥೆ ಇಂದಿಗೂ ಜನಪ್ರಿಯ.

ಕೃಷ್ಣನೆಂಬ ಗುರು

ಯಾರು ಅರಿವನ್ನು ಮೂಡಿಸುತ್ತಾರೋ ಅವರೇ ಗುರು. ಕೃಷ್ಣ ಮನುಕುಲಕ್ಕೆ ಬೆಳಕು ನೀಡಿದ ಮಹಾನ್ ಗುರು. ಮಾನವನ ಆಂತರಿಕ ಮತ್ತು ಬಾಹ್ಯದ ದೋಷವೆಂಬ ಮಲಿನವನ್ನು ತೊಳೆದು ಸ್ವಚ್ಛಗೊಳಿಸಲು ಗೀತಾಮೃತಕ್ಕಿಂತ ಮಿಗಿಲಾದ ಬೇರೊಂದು ಟಾನಿಕ್ ಬೇಕಿಲ್ಲ. ಅದೇ ಕಾರಣಕ್ಕೆ, ಕೆಲವು ಶಿಕ್ಷಣ ಸಂಸ್ಥೆಗಳು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಂಥ ದಿಗ್ಗಜ ಸಂಸ್ಥೆಗಳೂ ಭಗವದ್ಗೀತೆಯನ್ನು ಪಠ್ಯವಾಗಿ ಬೋಧಿಸುತ್ತಿವೆ. ಮಾನಸಿಕ ತಾಕಲಾಟಗಳಿಂದ ಹೊರಬರಲು ಅತ್ಯುತ್ತಮ ಮನೋವೈಜ್ಞಾನಿಕ ವಿಶ್ಲೇಷಣೆಯುಳ್ಳ ಗ್ರಂಥವೂ ಇದಾಗಿದೆ. ಹೀಗಾಗಿ ಐನ್‌ಸ್ಟೀನ್‌ರಂತಹ ಮಹಾ ವಿಜ್ಞಾನಿಗಳೂ ಗೀತೆಗೆ ಶರಣೆಂದಿದ್ದಾರೆ. 


ಜೀವನ ಸಂದೇಶಕ್ಕೆ ಸಾಟಿಯಿಲ್ಲ:

ಜೀವನದ ಕುರಿತು ಕೃಷ್ಣ ನೀಡಿರುವ ಸಂದೇಶವನ್ನು  ಪ್ರತಿ ನಿತ್ಯ ಓದುವುದರಿಂದ ಎಲ್ಲಾ ಬಗೆಯ ಆತಂಕ, ಸಂಕಷ್ಟ ಮತ್ತು ಗೊಂದಲಗಳಿಂದ ಮುಕ್ತಿ ಪಡೆಯಬಹುದು. ಜೀವನವನ್ನು ಪ್ರೀತಿಸಬಹುದು. ನಿರ್ಭಯರಾಗಿ ಬದುಕಬಹುದು.

ಜೀವನ ಎಂದರೇನು?

------------
ಜೀವನವೆಂದರೆ ಪ್ರತಿಭೆ- ಅದನ್ನು ಪರಿಪೂರ್ಣಗೊಳಿಸು
ಜೀವನವೆಂದರೆ ಉಡುಗೊರೆ- ಅದನ್ನು ಸ್ವೀಕರಿಸು
ಜೀವನವೆಂದರೆ ಸಾಹಸ-  ಮುನ್ನುಗ್ಗಿ ಸಾಧಿಸು
ಜೀವನವೆಂದರೆ ದುಃಖ- ಅದನ್ನು ನಿವಾರಿಸಿಕೊಳ್ಳು
ಜೀವನವೆಂದರೆ ದುರಂತ- ಅದನ್ನು ಎದುರಿಸು
ಜೀವನವೆಂದರೆ ಕರ್ತವ್ಯ- ಅದನ್ನು ನಿರ್ವಹಿಸು
ಜೀವನವೆಂಬುದು ಆಟ- ಅದನ್ನು ಚೆನ್ನಾಗಿ ಆಡು
ಜೀವನವೆಂಬುದು ರಹಸ್ಯ- ಅದನ್ನು ಅನಾವರಣಗೊಳಿಸು
ಜೀವನವೆಂಬುದು ಅವಕಾಶ- ಅದನ್ನು ಬಳಸಿಕೊಳ್ಳು
ಜೀವನವೆಂಬುದು ಪಯಣ- ಅದನ್ನು ಪೂರ್ಣಗೊಳಿಸು
ಜೀವನವೆಂಬುದು ವಾಗ್ದಾನ- ಅದನ್ನು ಈಡೇರಿಸು
ಜೀವನವೆಂಬುದು ಪ್ರೀತಿ- ಅದನ್ನು ಅನುಭವಿಸು
ಜೀವನವೆಂಬುದು ಸ್ಫೂರ್ತಿ- ಅದನ್ನು ಅರಿತುಕೋ
ಜೀವನವೆಂಬುದು ಸಂಕಷ್ಟ- ಅದರ ವಿರುದ್ಧ ಹೋರಾಡು
ಜೀವನವೆಂಬುದು ಒಗಟು- ಅದನ್ನು ಬಿಡಿಸು
ಜೀವನ ಎಂಬುದು ಗುರಿ- ಅದನ್ನು ಸಾಧಿಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ