ಶುಕ್ರವಾರ, ಅಕ್ಟೋಬರ್ 23, 2015

ಆನಂದ- ದುಃಖ  ಯಾವುದು ಬೇಕು?
ಒಬ್ಬ ಸೂಫಿ ಸಂತನಿದ್ದ. ಆತ ಜೀವವಿಡೀ ನಗುತ್ತಾ, ಸಂತೋಷದಿಂದಲೇ ಕಳೆದಿದ್ದ. ಅವನೆಂದೂ ಅಸಂತೋಷಗೊಂಡಿದ್ದನ್ನು ಆ ಊರಿನಲ್ಲಿ ಯಾರೂ ಆವರೆಗೆ ನೋಡಿರಲಿಲ್ಲ. ಸದಾ ನಗು- ನಗುತ್ತಲೇ ಇರುತ್ತಿದ್ದ; ಅದರಲ್ಲೇ ಆನಂದ ಕಂಡುಕೊಂಡಿದ್ದ. ಹೀಗೆ ಇರುತ್ತಾ ಹಣ್ಣು ಹಣ್ಣು ಮುದುಕನಾಗಿ ಸಾವಿನ ಸನಿಹಕ್ಕೆ ತಲುಪಿದ. ಇನ್ನೇನು ಪ್ರಾಣ ಪಕ್ಷಿ ಹಾರಿಹೋಗಬೇಕು ಎನ್ನುವ ಸಂದರ್ಭದಲ್ಲೂ ಅವನ ಮುಖದಲ್ಲಿನ ನಗು ಮಾಸಿರಲಿಲ್ಲ. ಸಾವನ್ನು ನಗು- ನಗುತ್ತಲೇ ಸ್ವೀಕರಿಸಲು ಸಿದ್ಧನಾಗಿದ್ದ. ಇವೆಲ್ಲ ಸಂತನ ಶಿಷ್ಯರಿಗೆ ಅಚ್ಚರಿ ಎನಿಸಿತು. ಇದೇನಿದು ಸಾವಿನ ಮನೆಯ ಹೊಸ್ತಿಲಲ್ಲಿದ್ದರೂ ಆನಂದ ಮತ್ತು ಸಂತಸದಲ್ಲಿದ್ದಾನಲ್ಲ ಎಂದೆನಿಸಿತು. ಗುರು ಸಾವಿನ ಸಮೀಪವಾಗಿರುವುದು ಕಂಡು ದುಃಖಿತರಾಗಿದ್ದ ಶಿಷ್ಯರು ಹೀಗೆಂದು ಪ್ರಶ್ನಿಸಿದರು, ಅಲ್ಲ ಗುರುಗಳೇ, ನೀವೊಂದು ರೀತಿ ಒಗಟಾಗಿದ್ದೀರಿ. ನೀವೀಗ ಸಾಯುತ್ತಿದ್ದೀರಿ, ಆದರೂ ನಗುತ್ತಿದ್ದೀರಲ್ಲ? ಅಂತಹದ್ದೇನಿದೆ ನಗಲು. ನಾವೆಲ್ಲ ದುಃಖಿತರಾಗಿದ್ದೇವೆ. ನಿಮಗೇನು ಅನ್ನಿಸುತ್ತಿಲ್ಲವೆ? ಜೀವನದಲ್ಲಿ ಒಮ್ಮೆಯೂ ಬೇಸರ ಆಗಿಲ್ಲವೆ, ಯಾಕೆ ದುಃಖಿರಾಗಿಲ್ಲ ಎನ್ನೋದನ್ನು ಕೇಳಬೇಕೆಂದು ಸಾಕಷ್ಟು ಸಲ ಅನ್ನಿಸಿತ್ತು. ಈಗ ನೀವು ಸಾವಿನ ಸಮ್ಮುಖದಲ್ಲಿದ್ದೀರಿ, ಇಂತಹ  ಸಂದರ್ಭದಲ್ಲಿ ಯಾರಿಗಾದರೂ ದುಃಖ ಆಗಲೇಬೇಕು. ಆದರೆ, ನೀವು ನಗುತ್ತಲೇ ಇದ್ದೀರಿ. ಇವೆಲ್ಲ ಹೇಗೆ ಸಾಧ್ಯವಾಯ್ತು? 
ಈ ಪ್ರಶ್ನೆಗಳ ಸುರಿಮಳೆಗೆ ಮುದುಕ ಉತ್ತರ ಕೊಟ್ಟ, ಇದು ಸರಳ, ನಾನು ಯುವಕನಾಗಿದ್ದಾಗ ನನ್ನ ಗುರುಗಳ ಬಳಿಗೆ ಹೋಗಿದ್ದೆ.  ನನಗೆ 17 ರ ಪ್ರಾಯ ಅಂತ ಕಾಣುತ್ತೆ, ಜೀವನ ಬಹಳ ಬೇಸರ ಹುಟ್ಟಿಸಿತ್ತು. ನನ್ನ ಗುರುಗಳು ಜೀವನದ ಸಂಧ್ಯಾಕಾಲದಲ್ಲಿದ್ದರು. ಅವರು ಒಂದು ಮರದ ಕೆಳಗೆ ಕುಳಿತ್ತಿದ್ದರು. ಯಾವುದೇ ಕಾರಣ, ಪ್ರೇರಣೆ ಇಲ್ಲದೆ ನಗುತ್ತಲಿದ್ದರು. ಅಲ್ಲಿ ಏನೂ ಘಟಿಸಿರಲಿಲ್ಲ. ಯಾರೊಬ್ಬರೂ ಇರಲಿಲ್ಲ, ನಗುವಂತಹ ಸಂಗತಿಗೆ ಸ್ಫೂರ್ತಿ ನೀಡುವಂತಹದ್ದೂ ಏನೂ ಇರಲಿಲ್ಲ ಆದರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರು. ನನಗೆ ತಡೆಯಲಾಗಲಿಲ್ಲ ಕೇಳಿಯೇ ಬಿಟ್ಟೆ, ‘ನಿಮಗೇನಾಗಿದೆ, ಹುಚ್ಚು- ಗಿಚ್ಚು ಹಿಡಿದಿದೆಯೇ?’. ಅದಕ್ಕೆ ಅವರು ಉತ್ತರಿಸಿದರು, ಒಂದೊಮ್ಮೆ ನಿನ್ನ ಹಾಗೆಯೇ ನಾನೂ ಬೇಸರ, ದುಃಖಭರಿತನಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಒಂದು ವಿಚಾರ ಹೊಳೆಯಿತು ಅದೇನೆಂದರೆ, ಇದು ನನ್ನ ಜೀವನ ಮತ್ತು ನನ್ನ ಆಯ್ಕೆ, ನಾನೇಕೆ ಬೇಸರದಿಂದ ಇರಬೇಕು? ಅವತ್ತಿನಿಂದ ಪ್ರತಿ ಬೆಳಿಗ್ಗೆ ನಾನು ಎದ್ದ ತಕ್ಷಣ ಕಣ್ಣು ಬಿಡುವುದಕ್ಕೆ ಮುಂಚೆ ನನ್ನಷ್ಟಕ್ಕೆ ನಾನು ‘‘ಅಬ್ದುಲ್ಲಾ’’ ಎಂದು ಹೇಳಿಕೊಳ್ಳುತ್ತೇನೆ. ಅದು ಆ ಮುದುಕನ ಹೆಸರಾಗಿತ್ತು. ಹಾಗೆ ಹೇಳಿಕೊಳ್ಳುವಾಗ ನಿನಗೇನು ಬೇಕು? ದುಃಖವೇ? ಆನಂದವೇ? ಇವೆರಡರಲ್ಲಿ ನೀನ್ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀಯ? ಸಹಜವಾಗಿ ನಾನು ಆನಂದವಾಗಿರುವುದನ್ನು ಆಯ್ಕೆ  ಮಾಡಿಕೊಳ್ಳಲಾರಂಭಿಸಿದೆ ಎಂದರು. ನೀನು ಹೇಗಿರಬೇಕು ಎಂಬುದು ನಿನ್ನ ಆಯ್ಕೆ, ಪ್ರಯತ್ನಿಸು. ನಿದ್ದೆಯಿಂದ ಎದ್ದಾಕ್ಷಣ ಸ್ವಯಂ ಅರಿವಿನ ಅನುಭವ ಆದೊಡನೆ, ನಿನ್ನಲ್ಲೇ ಕೇಳಿಕೋ, ‘ಅಬ್ದುಲ್ಲಾ, ಇನ್ನೊಂದು ದಿನ, ನಿನ್ನ ಕಲ್ಪನೆ ಏನು? ನೀನು ದುಃಖವನ್ನು ಆಯ್ದುಕೊಳ್ಳುತ್ತೀಯೋ ಇಲ್ಲ ಆನಂದವನ್ನೊ?’. ಯಾರು ತಾನೆ ದುಃಖವನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ? ಏತಕ್ಕಾಗಿ? ದುಃಖದಲ್ಲೂ ಆನಂದದ ಸ್ಥಿತಿ ಅನುಭವಿಸಲು ಸಾಧ್ಯವಾಗದಿದ್ದಲ್ಲಿ ಅಸ್ವಾಭಾವಿಕ ಎನಿಸುತ್ತದೆ. ಆಗಲೂ ಆನಂದವನ್ನೇ ಆಯ್ಕೆ ಮಾಡುತ್ತೀರಿಯೇ ಹೊರತು ದುಃಖವನ್ನಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ