ಸೋಮವಾರ, ನವೆಂಬರ್ 16, 2015



ವಂಡರ್ ಹರ್ಬ್ ಸಂಜೀವಿನಿ
ರಾಮಾಯಣದಲ್ಲಿ ರಾವಣನ ಪುತ್ರ ಇಂದ್ರಜಿತನ ಅಸ್ತ್ರ ಪ್ರಹಾರಕ್ಕೆ ಲಕ್ಷ್ಮಣ ಮೂರ್ಛೆ ಹೋಗಿ ಸಾವಿನಂಚಿಗೆ ತಲುಪಿದಾಗ, 
ಲಕ್ಷ್ಮಣನನ್ನು  ಬದುಕಿಸಿದ್ದು ‘ಸಂಜೀವಿನಿ’ ಎಂಬ ಗಿಡಮೂಲಿಕೆ. ಅಂತಹದ್ದೊಂದು ಮೂಲಿಕೆ ಕಾಲ್ಪನಿಕ ಎನ್ನಲಾಗುತ್ತಿತ್ತು.
 ಇದೀಗ ಭಾರತೀಯ ವಿಜ್ಞಾನಿಗಳು ಹಿಮಾಲಯದ ಅತ್ಯಂತ ಎತ್ತರದ ಪ್ರದೇಶದಲ್ಲಿ ಅಪರೂಪದ ಮೂಲಿಕೆಯನ್ನು ಶೋಧಿಸಿದ್ದು, ಅದುವೇ ‘ಸಂಜೀವಿನಿ’ ಇರಬಹುದೆಂದು ನಂಬಲಾಗಿದೆ.
ಸದ್ಯಕ್ಕೆ ವಿಜ್ಞಾನಿಗಳು ಈ ಮೂಲಿಕೆಗೆ ‘ಅದ್ಭುತ ಮೂಲಿಕೆ’ ಅಥವಾ ‘ವಂಡರ್ ಹರ್ಬ್’ ಎಂದು ಹೆಸರಿಸಿದ್ದಾರೆ. ಹಿಮಾಲಯ  ಪರ್ವತದ ಅತ್ಯಂತ ಎತ್ತರದ ಪ್ರತಿಕೂಲ ಹಾಗೂ ಜೀವಿಸುವುದೇ ಕಷ್ಟವೆನಿಸುವ ಪ್ರದೇಶದಲ್ಲಿ ಈ ಮೂಲಿಕೆ ಪತ್ತೆಯಾಗಿದ್ದು, ರೋಗ ನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ಪರ್ವತದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದರ ಜೊತೆಗೆ ವಿಕಿರಣದಿಂದ ದೇಹವನ್ನು ರಕ್ಷಿಸುವ ಗುಣವನ್ನೂ ಹೊಂದಿದೆ.
ಅತ್ಯಂತ ಎತ್ತರದ ಹಾಗೂ ಹಿಮಪ್ರದೇಶದಲ್ಲಿ ಇದನ್ನು ಪತ್ತೆ ಮಾಡುವ ಮೂಲಕ ಭಾರತದ ವಿಜ್ಞಾನಿಗಳು ತಮ್ಮ ಹುಡುಕಾಟದ ಸಂಜೀವಿನಿ ಮೂಲಿಕೆ ಇದೇ ಆಗಿರಬಹುದು ಎಂಬ ನಿರ್ಣಯಕ್ಕೆ ಬರಬೇಕಿದೆ. ಅದು ನಿಜವೇ ಆಗಿದ್ದಲ್ಲಿ, ಅವರ ಶೋಧಕ್ಕೆ ತೆರೆ ಬೀಳಲಿದೆ. ಲಡಾಖ್‌ನಲ್ಲಿ ಸ್ಥಳೀಯರು ಈ ಮೂಲಿಕೆಗೆ ‘ಸೋಲೊ’ ಎಂದು ಕರೆಯುತ್ತಾರೆ. ಈ ಮೂಲಿಕೆಯ ಔಷಧೀಯ ಗುಣಗಳು ಇನ್ನಷ್ಟೆ ಬೆಳಕಿಗೆ ಬರಬೇಕು. ಸ್ಥಳೀಯರು ಈ ಸಸ್ಯದ ಎಲೆಗಳನ್ನು ಸೊಪ್ಪಿನಂತೆ ಆಹಾರದ ಜತೆ ಸೇವಿಸುತ್ತಾರೆ.
ಲೇಹ್‌ನ ‘ಡಿಫೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರೀಸರ್ಚ್’ ಈ ಮೂಲಿಕೆಯ ಔಷಧೀಯ ಗುಣಗಳನ್ನು ವೈಜ್ಞಾನಿಕ ಪರೀಕ್ಷೆ ನಡೆಸುತ್ತಿದೆ. ಅಷ್ಟೇ ಅಲ್ಲ ಹಿಮಾಲಯದ ಅತ್ಯಂತ ಎತ್ತರದ ಸೇನಾ ನೆಲೆ ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿನ ಯೋಧರ ಸೇವನೆಗೆ ನೀಡಲಾಗುತ್ತಿದೆ. ಇದು ಉತ್ತಮ ಪರಿಣಾಮ ಬೀರಿದೆ.
ಡಿಫೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರೀಸರ್ಚ್‌ನ ನಿರ್ದೇಶಕ ಆರ್.ಬಿ.ಶ್ರೀವಾಸ್ತವ ಅವರ ಪ್ರಕಾರ, ಈ ಅದ್ಭುತ ಗಿಡಮೂಲಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಹವಾಮಾನದ ಪ್ರದೇಶದಲ್ಲಾದರೂ ಹೊಂದಿಕೊಳ್ಳಲು 
ಸಾಧ್ಯವಿದೆ ಮತ್ತು ವಿಕಿರಣದಿಂದ ರಕ್ಷಣೆಯನ್ನು ಪಡೆಯಬಹುದಾಗಿದೆ. ಈ ಸಸ್ಯದಲ್ಲಿ ಉಪಾಪಚಯಕ (ಮೆಟಬೊಲೈಟೀಸ್) ಮತ್ತು ಸಸ್ಯಜನ್ಯ ಅಂಶಗಳು ವಿಶಿಷ್ಟವಾದವು.
ಈ ಸಸ್ಯದ ಇನ್ನೂ ವಿಶೇಷವೆಂದರೆ, ಜೀವರಸಾಯನಿಕ ಅಸ್ತ್ರಗಳು ಮತ್ತು ಸ್ಫೋಟಕಗಳಲ್ಲಿ ಇರುವ ಗ್ಯಾಮ ವಿಕಿರಣದ ಪರಿಣಾಮವನ್ನು ಮೂಲಿಕೆ  ಶಮನಗೊಳಿಸುತ್ತದೆ. ಮೂಲಿಕೆಯ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಪ್ರಚಾರಕ್ಕಾಗಿ ಸಂಘಟನಾ ಪ್ರಯತ್ನ ಹಾಕಬೇಕು. ಹಿಮಾಲಯದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಇದರಿಂದ ಬಹಳಷ್ಟು ಪ್ರಯೋಜವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮೂಲಿಕೆಯ ಬಗ್ಗೆ  ಕಳೆದೊಂದು ದಶಕದಿಂದ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಲೇಹ್ ಸಸ್ಯ, ಪ್ರಾಣಿ ಸಂಶೋಧನಾ ಪ್ರಯೋಗಾಲಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಈ ಮೂಲಿಕೆಯ ಹೊಂದಾಣಿಕೆ ಗುಣದಿಂದಾಗಿ ಯೋಧರು  ಅತ್ಯಂತ ಕಡಿಮೆ ಒತ್ತಡ ಮತ್ತು ಕಡಿಮೆ ಆಮ್ಲಜನಕದ ಪರಿಸರದಲ್ಲೂ ಹೊಂದಣಿಕೆ ಮಾಡಿಕೊಳ್ಳಬಲ್ಲರು. ಅಷ್ಟೇ ಅಲ್ಲ, ಖಿನ್ನತೆ ನಿರೋಧಕ ಮತ್ತು ಹಸಿವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಖಿನ್ನತೆ ಆವರಿಸುವುದು ಸಹಜ. ಕಾರಣ, ಅಲ್ಲಿ ಎಲ್ಲೆಲ್ಲೂ ಮಂಜು, ಭೂಮಿಯೂ ಬರಡು ಮತ್ತು ದೂರ ದೃಷ್ಟಿ ಹಾಯಿಸಿದಷ್ಟೂ ದೂರ ಬಿಳಿ ಬಣ್ಣವೇ ಕಾಣುತ್ತದೆ. ಹೀಗಾಗೆ ಯೋಧರು ಖಿನ್ನತೆಗೆ  ಒಳಗಾಗುತ್ತಾರೆ. ಇಲ್ಲಿನ ವಾತವಾರಣದಿಂದ ಹಸಿವೂ ಕಡಿಮೆ ಆಗುತ್ತದೆ. ಈ ಮೂಲಿಕೆಯನ್ನು ಬಳಸಿ ಡಿಫೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರೀಸರ್ಚ್ ಸಂಸ್ಥೆ ಔಷಧವನ್ನು ತಯಾರಿಸಿ ಸಿಯಾಚಿನ್‌ನಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ನೀಡುತ್ತಿದೆ. ಇದರಿಂದಾಗುವ ಪರಿಣಾಮದ ಬಗ್ಗೆ  ಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಮೂಲಿಕೆಯನ್ನು ಚೀನಾದ ಸಾಂಪ್ರದಾಯಿಕ ಔಷಧಿಯಲ್ಲಿ ಎತ್ತರ ಪ್ರದೇಶದ ಅಸ್ವಸ್ಥತೆಯನ್ನು ನಿವಾರಿಸಲು ಬಳಸಿದರೆ, ಮಂಗೋಲಿಯಾದ ವೈದ್ಯರು ಕ್ಷಯ ಮತ್ತು ಕ್ಯಾನ್ಸರ್ ಕಾಯಿಲೆಗೆ ಈ ಮೂಲಿಕೆ ಔಷಧವನ್ನು ಸೇವಿಸಲು ಸಲಹೆ ನೀಡುತ್ತಾರೆ. ರಷ್ಯಾದಲ್ಲಿ ಅಥ್ಲೀಟ್‌ಗಳು ಮತ್ತು ಗಗನಯಾತ್ರಿಗಳಿಗೆ ಇದೇ ಬಗೆಯ ಗಿಡಮೂಲಿಕೆಯ ಔಷಧವನ್ನು ನೀಡಿ ಅದರ ಪರಿಣಾಮವನ್ನು ಅಧ್ಯಯನ ನಡೆಸಲಾಗುತ್ತಿದೆ. ಈ ಸಸ್ಯದಲ್ಲಿರಬಹುದಾದ ಇತರ ಗುಣಗಳ ಬಗ್ಗೆ ಅದರಲ್ಲೂ ನೆನಪಿನ ಶಕ್ತಿ ವೃದ್ಧಿ ಮತ್ತು ಹೃದಯದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳನ್ನು ವಿಶ್ವದ ಹಲವೆಡೆ ನಡೆಸಲಾಗುತ್ತಿದೆ.
 
ಈ ಮೂಲಿಕೆಯನ್ನು ಸೇವಿಸುವುದರಿಂದ ಮುಪ್ಪನ್ನು ಮುಂದುಡಬಹುದು, ದೇಹದ ಕೋಶಗಳನ್ನು ಪುನುರುಜ್ಜೀವನಗೊಳಿಸಬಹುದು. ಆಮ್ಲಜನಕದ ಕೊರತೆ ಇರುವ ಸಂದರ್ಭದಲ್ಲೂ ನ್ಯೂರಾನ್‌ಗಳನ್ನು ರಕ್ಷಿಸುತ್ತದೆ ಹಾಗೂ  ಅರಿವಿನ ಪ್ರಮಾಣವೂ ಉತ್ತಮಗೊಳ್ಳುತ್ತದೆ.
-ಸುನೀಲ್ ಹೋಟ, ಸಂಶೋಧಕ

* ಇದರ ಜೀನ್ ಬ್ಯಾಂಕ್ ಸ್ಥಾಪಿಸಲಾಗಿದೆ. ಪ್ರಯೋಗಾಲಯದ ಎರಡು ಎಕರೆ ಜಾಗದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ. ಈ ಸಸ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದ್ದೇವೆ.
-  ಓ.ಪಿ.ಚೌರಾಸಿಯಾ, ಸಸ್ಯ ವಿಜ್ಞಾನಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ