ಶುಕ್ರವಾರ, ಅಕ್ಟೋಬರ್ 30, 2015



ಸ್ವರ್ಗದ ಬಾಗಿಲು

ಸ್ವರ್ಗ ಮತ್ತು ನರಕದ ಬಗ್ಗೆ ಚರ್ಚೆಗಳು ಸಾಮಾನ್ಯ.
 ಜಗತ್ತಿನಲ್ಲಿ  ಈ ವಿಷಯಗಳ ಬಗ್ಗೆ  ವಿಚಾರ ಮಂಥನ ನಡೆಯುತ್ತಲೇ ಇರುತ್ತದೆ.
 ಒಮ್ಮೆ ಜಪಾನಿನಲ್ಲಿ  ಇಬ್ಬರ ನಡುವೆ ಇಂತಹುದೇ ಚರ್ಚೆ ಆರಂಭವಾಗುತ್ತದೆ.
 ನೊಬುಷಿಗೆ ಎಂಬ ಸೈನಿಕ  ಹಕೂಯಿನ್ ಎಂಬ ಸಾಮಾನ್ಯ ರೈತನ ಬಳಿ ಬರುತ್ತಾನೆ. 
"ನಿಜಕ್ಕೂ ಸ್ವರ್ಗ ಮತ್ತು ನರಕ ಎಂಬುದಿದೆಯೇ?" ಎಂದು ನೊಬುಷಿಗೆ ಕೇಳುತ್ತಾನೆ.
ಅದಕ್ಕೆ ಹಕೂಯಿನ್, ‘ನೀನ್ಯಾರು’ ಎಂದು ಪ್ರಶ್ನಿಸುತ್ತಾನೆ.
‘ನಾನು ಸಮುರಾಯ್’(ಯೋಧ) ಎಂದು ನೊಬುಷಿಗೆ ಉತ್ತರಿಸುತ್ತಾನೆ.
‘ನೀನೊಬ್ಬ ಸೈನಿಕನೇ’ ಎಂಬ ಉದ್ಘಾರ ಹಕೂಯಿನ್‌ನಿಂದ ಹೊರಡುತ್ತದೆ. 
 ಅಷ್ಟಕ್ಕೆ ನಿಲ್ಲಿಸದ ಆತ, ‘ನಿನ್ನ ರಾಜ ಎಂಥವನು ನಿನ್ನಂತಹವನನ್ನು ರಕ್ಷಣಾಭಟನನ್ನಾಗಿ ಇಟ್ಟುಕೊಂಡಿದ್ದಾನೆ. ನಿನ್ನ ಮುಖ ನೋಡಿದರೆ ಭಿಕ್ಷುಕನ ಹಾಗೆ ಕಾಣಿಸುತ್ತದೆಯಲ್ಲ’ ಎಂದು ಮಾತಿನಿಂದ ತಿವಿದ. 
ಈ ಮಾತುಗಳನ್ನು ಕೇಳುತ್ತಿದ್ದಂತೆ ನೊಬುಷಿಗೆಗೆ ನಖ- ಶಿಖಾಂತ ಸಿಟ್ಟು ಬರುತ್ತದೆ. ಕೂಡಲೇ ಖಡ್ಗವನ್ನು ಹಿರಿದು ನಿಲ್ಲುತ್ತಾನೆ.
 ‘ಓಹ್ ನಿನ್ನ ಬಳಿ ಖಡ್ಗ ಇದೆಯೇ? ನಿನ್ನ ಖಡ್ಗ ಮೊಂಡಾಗಿದೆ ಅಂತ ಕಾಣುತ್ತೆ. ಅದು ನನ್ನ ಕತ್ತನ್ನು ಕತ್ತರಿಸಲಾರದು’ ಎಂದು ಹಕೂಯಿನ್ ಮತ್ತೆ ಕೆಣಕುತ್ತಾನೆ. ನೊಬುಷಿಗೆ ಮತ್ತೆ ಸಿಟ್ಟಾಗಿ ಖಡ್ಗ ಎಳೆಯುತ್ತಿದ್ದಂತೆ, ಹಕೂಯಿನ್ ಹೇಳುತ್ತಾನೆ, ‘ನೋಡು...ನೋಡು ನರಕದ ಬಾಗಿಲು ತೆರೆಯಿತು’ ಎನ್ನುತ್ತಾನೆ. 
ಈ ಮಾತು ಕೇಳುತ್ತಿದ್ದಂತೆ ಯೋಧನ ಮನಸ್ಸಿನಲ್ಲಿ ಮಿಂಚೊಂದು ಹೊಳೆದಂತಾಗುತ್ತದೆ. 
ತನ್ನ ಗುರುವಿನ ಆದೇಶ ನೆನಪಿಗೆ ಬಂದು ಶಿಸ್ತಿನಿಂದ ನಿಲ್ಲುತ್ತಾನೆ. ಖಡ್ಗವನ್ನು ಒರೆಯೊಳಗೆ ಇರಿಸಿ, ಬಳಿಕ ನಡುಬಾಗಿಸಿ ನಿಲ್ಲುತ್ತಾನೆ.
 'ನೋಡು ಈಗ ಸ್ವರ್ಗದ ಬಾಗಿಲು ತೆರೆಯಿತು' ಎಂದು ಹೇಳುತ್ತಾನೆ ಹಕೂಯಿನ್. ಕಥೆ ಅಲ್ಲಿಗೆ ಪೂರ್ಣಗೊಳ್ಳುತ್ತದೆ.
 ಈ ಪುಟ್ಟ ಝೆನ್ ಕಥೆಯನ್ನು ಹಲವು ಬಾರಿ ಕೇಳಿರಲಿಕ್ಕೂ ಸಾಕು. ಆದರೆ, ಇದರ ಅರ್ಥ ಮತ್ತು ಉದ್ದೇಶ ಬಹಳ ವಿಶಾಲವಾದುದು. ಇದು ನಮ್ಮ ಆಂತರ್ಯವನ್ನು ಶೋಧಿಸುವ ಮತ್ತು  ವ್ಯಕ್ತಿತ್ವವನ್ನು ಆಮೂಲಾಗ್ರ ಬದಲಾವಣೆ ಮಾಡಬಹುದಾದ ಶಕ್ತಿ ಇರುವ ಒಂದು ಕಥೆ.
 ಕೆಲವು ಸಂದರ್ಭದಲ್ಲಿ ದೊಡ್ಡವರಿರಲಿ, ಮಕ್ಕಳಿರಲಿ ಪೂರ್ವಪರ ಆಲೋಚಿಸದೇ ಕೆಲವು ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅದರಿಂದ ಆಗುವ ಹಾನಿಯೇ ಹೆಚ್ಚು. ಇದಕ್ಕೆ ಸಿಟ್ಟು, ಸೆಡವು, ಆತುರವೇ ಕಾರಣ. ವಿವೇಕ- ವಿವೇಚನೆ ಬಳಸದೇ ವರ್ತಿಸುತ್ತಾರೆ.
 ಅದಕ್ಕೊಂದು ನಿದರ್ಶನ -  ಒಬ್ಬ ಬಾಲಕಿಗೆ ಮರುದಿನ  ಶಾಲಾ ಪರೀಕ್ಷೆ ಇರುತ್ತದೆ. ಆದರೆ, ತಯಾರಿ ಮಾಡಿಕೊಂಡಿರುವುದಿಲ್ಲ. ಅದಕ್ಕೆ ಕಾರಣಗಳು ಹಲವು. ಇದ್ದಕ್ಕಿದ್ದಂತೆ ಒತ್ತಡಕ್ಕೆ ಒಳಗಾಗಿ, ನಾನು ನಾಳೆ ಪರೀಕ್ಷೆಗೆ ಕೂರುವುದಿಲ್ಲ.  ನಾನು ಹೆಚ್ಚು ಅಂಕಗಳಿಸಲು ಆಗಲ್ಲ. ಯಾವಾಗಲೂ ಚೆನ್ನಾಗಿ ಅಂಕ ತೆಗೆಯುತ್ತಿದ್ದ  ನಾನು ಕಡಿಮೆ ಅಂಕ ತೆಗೆದರೆ ಸಹಪಾಠಿಗಳು ಆಡಿಕೊಳ್ಳುತ್ತಾರೆ ಎಂದು ತನ್ನ ತಂದೆ ಬಳಿ ಹೇಳಿಕೊಂಡಳು. ಅವಳ ಮನಸ್ಥಿತಿ ಅರ್ಥೈಸಿದ ಅಪ್ಪ, ಕೆಲವು ಧೈರ್ಯ ತುಂಬುವ ಮಾತುಗಳನ್ನು ಆಡಿ, ಆಕೆಯ ಜತೆ ಕುಳಿತು, ಪರೀಕ್ಷೆಗೆ ತಯಾರಿ ಮಾಡಿಸುತ್ತಾನೆ. ಲಭ್ಯವಿದ್ದ ಸಮಯದಲ್ಲಿ ಮಾಡಿ ತೋರಿಸುತ್ತಾನೆ. ಬಾಲಕಿ ಪರೀಕ್ಷೆಗೆ ಸಂಪೂರ್ಣ ತಯಾರಾಗುತ್ತಾಳೆ. ಮನಸ್ಸಿನ ದುಗುಡ ಮಾಯವಾಗುತ್ತದೆ.  ಸ್ವರ್ಗದ ಬಾಗಿಲು ತೆರೆಯುವುದು ಎಂದರೆ ಹೀಗೆ ಅಲ್ಲವೆ?