ಗುರುವಾರ, ನವೆಂಬರ್ 12, 2015


ಕಾಲಗರ್ಭದಿಂದ ಹೊರಬಂತು ವಾನರ ದೇವತಾ ನಗರಿ

* ಸೇನೆಯೊಂದಿಗೆ  ಮೊದಲ ಬಾರಿ ಕಾಲಿಟ್ಟ ಸಂಶೋಧಕರ ತಂಡ
* ಹೊಂಡುರಾಸ್ ಜಾನಪದ ಕಥೆಗಳಲ್ಲಿ ಉಲ್ಲೇಖವಾಗಿದ್ದ ಪ್ರಾಚೀನ ಪಟ್ಟಣ
*‘ಹನುಮಂತ’ ಪೂಜಿಸಲ್ಪಡುತ್ತಿದ್ದ ಸಂಸ್ಕೃತಿ
*ಲೂಟಿಕೋರರಿಂದ ರಕ್ಷಿಸಲು ನಗರವಿದ್ದ ಸ್ಥಳ ಇನ್ನೂ ಗೌಪ್ಯ


ತಂಡವು ಹಾರೆ-ಪಿಕಾಸು, ಕತ್ತಿಗಳನ್ನು, ಕ್ಯಾಮರಾ ಹಿಡಿದು ಶಸ್ತ್ರಧಾರಿ ಸೈನಿಕರ ಜತೆ ಹೊರಟಿದ್ದು, ಅತ್ಯಂತ ನಿಗೂಢ, ವಿಸ್ಮಯಕಾರಿ ತಾಣಕ್ಕೆ. ಸಾವಿರಾರು ವರ್ಷಗಳ ಅವಧಿಯಲ್ಲಿ ಬೆರಳೆಣಿಕೆಯಷ್ಟು ಆಧುನಿಕ ಜನ ಇಲ್ಲಿಗೆ ಕಾಲಿಟ್ಟಿರಬಹುದಷ್ಟೆ. ಮಾನವ ಪ್ರವೇಶವೇ ಕಷ್ಟ ಎಂಬಂತಿರುವ ದಟ್ಟ ಕಾನನ. ‘ಶ್ವೇತ ನಗರಿ’, ‘ವಾನರ ದೇವನ ನಗರಿ’ ಎಂದೂ ಇಲ್ಲಿನ ಅಜ್ಜಿ ಕಥೆಗಳಲ್ಲಿ ಈ ಸ್ಥಳ ಉಲ್ಲೇಖಿತಗೊಂಡಿದೆ. ಅಂದ ಹಾಗೆ, ಈ ಕಥೆಯ ಹಾಗೂ ನಿಗೂಢ ತಾಣ ಇರುವುದು ಭಾರತದಲ್ಲಿ ಅಲ್ಲ. ಹೊಂಡುರಾಸ್ ದಟ್ಟಡವಿಯಲ್ಲಿ. ಇದು ಸೆಂಟ್ರಲ್ ಅಮೆರಿಕದಲ್ಲಿ ಗ್ವಾಟೆಮಾಲಕ್ಕೆ ಹೊಂದಿಕೊಂಡಂತಿದೆ.
ವಾನರ ದೇವತೆ ಅಥವಾ ಹನುಮಂತ ಸಹಸ್ರಾರು ವರ್ಷಗಳ ಹಿಂದೆ ಭಾರತದಿಂದ ಆಚೆಗೂ ಪೂಜಿತಗೊಂಡಿದ್ದ ನಗರವಿದು. ಮೊದಲ ಬಾರಿಗೆ ಸಂಶೋಧಕರ ತಂಡವು ಕಾಲನ ತುಳಿತಕ್ಕೆ ಹುದುಗಿ ಹೋಗಿದ್ದ ನಗರವನ್ನು ಬೆಳಕಿಗೆ ತಂದಿದೆ. ‘ಹೊಂಡುರಾಸ್ ನಾಗರಿಕತೆ’ ಎಂದೇ ಕರೆಯಲ್ಪಡುವ ನಿಗೂಢ ಸಂಸ್ಕೃತಿಗಳ ನಗರ ಅಷ್ಟೇ ನಿಗೂಢವಾಗಿ ಅವನತಿ ಹೊಂದಿತ್ತು. ಆ ಕುರಿತು ಅಜ್ಜಿ ಕಥೆಗಳನ್ನು ಬಿಟ್ಟರೆ ಬೇರೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಅಜ್ಜಿ ಕಥೆ ಎಂದು ನಿರ್ಲಕ್ಷಿಸದೆ, ಪಟ್ಟು ಬಿಡದ ಶೋಧಕರ ತಂಡವು ಬೆನ್ನು ಹಿಡಿದು ಹೋದ ಪರಿಣಾಮ ಅಂತಿಮವಾಗಿ ಈ ನಗರಿ ಸಿಕ್ಕಿದೆ!
ಇಲ್ಲಿ ಹೊಂಡುರಾಸ್ ನಾಗರಿಕತೆಗೆ ಸಂಬಂಧಿಸಿದ ಪೇಟೆ ಬೀದಿ, ಮಾನವ ನಿರ್ಮಿತ ದಿಬ್ಬ, ಪಿರಮಿಡ್ ಪತ್ತೆ ಮಾಡಲಾಗಿದೆ. ಅವು ಅನೇಕ ಸಹಸ್ರಮಾನಗಳಿಗಿಂತ ಹಳೆಯವು. ಪುರಾತತ್ತ್ವಜ್ಞರು ಅಷ್ಟೂ ಪ್ರದೇಶಗಳ ನಕಾಶೆ ರೂಪಿಸಿದ್ದಾರೆ. ಶೋಧಕ ತಂಡವು ಕಳೆದ ಬುಧವಾರವಷ್ಟೇ ಪ್ರಾಚೀನ ನಾಗರಿಕತೆಯ ಸ್ಥಳದಿಂದ ಹಿಂದಕ್ಕೆ ಬಂದಿದೆ. ಇವೆಲ್ಲದರ ಮಧ್ಯೆ ಆ ತಂಡವು ಭೂಮಿಯಲ್ಲಿ ಹುಗಿದು ಹೋಗಿದ್ದ ಅತ್ಯಪೂರ್ವ ಶಿಲ್ಪವೊಂದನ್ನು ಶೋಧಿಸಿದೆ. ಈ ನಗರ ಇದಕ್ಕಿದ್ದಂತೆ ಅವನತಿ ಹೊಂದಿ, ಪರಿತ್ಯಕ್ತಗೊಂಡ ಬಳಿಕ ಯಾರೂ ಸ್ಪರ್ಶಿಸಿರಲಿಲ್ಲ.
ಈ ಪ್ರದೇಶವು ಮಾಯ ನಾಗರಿಕತೆ ಅಭಿವೃದ್ಧಿಗೊಂಡಿದ್ದ ತಾಣಕ್ಕೆ ಸಮೀಪವಿದ್ದರೂ ಬೆಳಕಿಗೆ ಬಾರದಿದ್ದದ್ದು ವಿಶೇಷ. ಇಲ್ಲಿ ಇನ್ನೂ ಏನೇನು ಇವೆ ಎಂಬುದು ಗೊತ್ತಿಲ್ಲ. ಅಧ್ಯಯನ ಮುಂದುವರಿಯಬೇಕಷ್ಟೆ. ಅಷ್ಟೇ ಅಲ್ಲ, ಇದಕ್ಕೆ ಏನು ಹೆಸರಿಡಬೇಕು ಎಂಬುದೇ ಪುರಾತತ್ತ್ವಜ್ಞರಿಗೆ ಹೊಳೆಯುತ್ತಿಲ್ಲ!
ಹೊಂಡುರಾಸ್ ಇರುವುದು ಸೆಂಟ್ರಲ್ ಅಮೆರಿಕದಲ್ಲಿ. ಇದರ ಒಂದು ಬದಿ ಗ್ವಾಟೆಮಾಲ, ಮತ್ತೊಂದು ಕಡೆ ಎಲ್ ಸಾಲ್ವಡಾರ್ ಮತ್ತು ನಿಕಾರಗುವಾ ಸುತ್ತುವರಿದಿವೆ. ಕೊಲೊರಾಡೊ ಸ್ಟೇಟ್ ವಿಶ್ವವಿದ್ಯಾಲಯದ ಮೆಸೊ ಅಮೆರಿಕನ್ ಪುರಾತತ್ತ್ವಜ್ಞ ಕ್ರಿಸ್ಟೋಫರ್ ಫಿಷರ್ ಪ್ರಕಾರ, ಇಂತಹದ್ದೊಂದು ನಾಗರಿಕತೆಯ ತಾಣ ಇನ್ನೂ ಮೂಲರೂಪದಲ್ಲೇ ಇದೆ. ಲೂಟಿ ಮಾಡಿದ ಯಾವುದೇ ಕುರುಹೂ ಇಲ್ಲ. ನಿಜಕ್ಕೂ ನಂಬುವುದಕ್ಕೂ ಕಷ್ಟವೆನಿಸುವಷ್ಟು ಅಪೂರ್ವವಾದುದು. ಪಿರಮಿಡ್ ಅಡಿ ಭಾಗದಲ್ಲಿ ಮಾನವ ನಿರ್ಮಿತ ಸಾಧನಗಳು ಸಿಕ್ಕಿವೆ. ಪ್ರಾಯಶಃ ಇಲ್ಲಿ ಧಾರ್ಮಿಕ ಕ್ರಿಯಾ ವಿಧಾನಗಳು ನಡೆಯಲು ಬಳಸುತ್ತಿದ್ದ ಅಥವಾ ಬಲಿ ಇತ್ಯಾದಿಯ ಜಾಗವೂ ಆಗಿರಬಹುದು.
Copan, Honduras: ಮಾನವ ನಿರ್ಮಿತ ಸಾಧನ, ಸಲಕರಣೆಗಳನ್ನು ಭೂಮಿಯಿಂದ ಹೊರ ತೆಗೆಯಲಾಗಿದೆ. ಸಮಾಧಿ ಬಳಸಿದ ಸಾಧನ, ಉತ್ಸವಾಚರಣೆಯ ಕಲ್ಲಿನ ವೇದಿಕೆ, ಅಂದವಾದ ಕೆತ್ತನೆ ಹೊಂದಿರುವ ಪಾತ್ರೆಗಳು, ಅವುಗಳಲ್ಲಿ ಕೆಲವು ಪಾತ್ರೆಗಳಲ್ಲಿ ಹಾವು, ಮೃಗರೂಪದ ಪ್ರಾಣಿಗಳು, ಹದ್ದುಗಳ ಕೆತ್ತನೆಗಳನ್ನು ಕಾಣಬಹುದಾಗಿದೆ.
ಸಂಶೋಧಕರ ತಂಡ ಇಲ್ಲಿ ಮತ್ತಷ್ಟು ಜಾಲಾಡಿದಾಗ ಸಿಕ್ಕಿದ್ದು ಒಂದು ಕಲ್ಲಿನ ತಲೆ ಬುರುಡೆ, ಅದು ‘ಜಾಗ್ವಾರ್’(ಕಪ್ಪು ಬಣ್ಣದ ಚಿರತೆ ಜಾತಿಯ ಪ್ರಾಣಿ) ಹೋಲುತ್ತದೆ. ಒಂದೋ ಇದನ್ನು ಅಂದಿನ ಮಾಂತ್ರಿಕರು ತಾಂತ್ರಿಕ ಕ್ರಿಯೆಗಳಿಗೆ ಬಳಸುತ್ತಿದ್ದಿರಬಹುದು. ಇಲ್ಲವೇ, ಧಾರ್ಮಿಕ ಕ್ರಿಯಾ ಆಟಗಳಲ್ಲಿ ಬಳಸಲ್ಪಡುತ್ತಿದ್ದುದಾಗಿರಬಹುದು. ರುಂಡದ ಆಕೃತಿ ಶಿರಸ್ತ್ರಾಣ ಧರಿಸಿದಂತೆ ತೋರುತ್ತದೆ ಎಂದು ಫಿಷರ್ ಅಭಿಪ್ರಾಯಪಟ್ಟಿದ್ದಾರೆ. 
ಹೊಂಡುರಾಸ್ ಇನ್ಸ್‌ಟಿಟ್ಯೂಟ್ ಆಫ್ ಆಂಥ್ರಪಾಲಜಿ ವಿಭಾಗದ ಪುರಾತತ್ವ್ತಜ್ಞ ಆಸ್ಕರ್ ನೀಲ್ ಕ್ರುಝ್ ತರ್ಕವೆಂದರೆ, ಈ ಸಾಧನಗಳು ಕ್ರಿ.ಶ. 1000 ದಿಂದ 1400 ರ ಅವಧಿಯದ್ದಾಗಿರಬಹುದು. ಸಂಶೋಧಕರು ಅಲ್ಲಿ ಸಿಕ್ಕ ವಸ್ತುಗಳನ್ನು ದಾಖಲೀಕರಣ ಮಾಡಿದ್ದು, ಯಾವುದೇ ಉತ್ಖನನ ಕಾರ್ಯಕ್ಕೆ ಕೈ ಹಾಕಲಿಲ್ಲ. ಲೂಟಿಕೋರರಿಂದ ತಾಣವನ್ನು ರಕ್ಷಿಸಲು ಈ ಪ್ರಾಚೀನ ಈ ತಾಣ ಎಲ್ಲಿದೆ ಎಂಬುದನ್ನು ರಹಸ್ಯವಾಗಿಡಲಾಗಿದೆ.
ಕಥೆಗಳ ಆಗರ:
ಈ ಪ್ರದೇಶದ ಬಗ್ಗೆ ವರ್ಣರಂಜಿತ ಕಥೆಗಳಿವೆ. ಮೊದಲಿಗೆ ಇದನ್ನು ಪತ್ತೆ ಮಾಡಿದ್ದು 2012ರಲ್ಲಿ. ಲಾಮಾಸ್ಕಿಟಾ ಕಣಿವೆಯ ಮೇಲೆ ವೈಮಾನಿಕ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅವಶೇಷಗಳು ಗೋಚರಕ್ಕೆ ಬಂದವು. ಇಲ್ಲಿ ವಿಶಾಲ ಜೌಗು ಪ್ರದೇಶ ಕಂಡುಬಂದಿತು. ನದಿಗಳು, ಪರ್ವತಗಳಿದ್ದವು. ಆವರೆಗೆ ಈ ಪ್ರದೇಶವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿರಲಿಲ್ಲ. ಆದರೆ, ನೂರಾರು ವರ್ಷಗಳಿಂದ ಇಲ್ಲೊಂದು ಅಳಿದು ಹೋದ ನಗರಿಯ ಶ್ವೇತ ವರ್ಣದ ಕೋಟೆ ಇದೆ, ಶ್ವೇತ ಮಹಲು ಇದೆ. ಇಲ್ಲಿ ವಾನರ ದೇವತೆಯನ್ನು ಪೂಜಿಸುತ್ತಾರೆ ಇತ್ಯಾದಿ ಕಥೆಗಳಿದ್ದವು. ಈಡನ್‌ನಂತಹ ಸ್ವರ್ಗ ಸದೃಶ ತಾಣವದು. ಸ್ಪಾೃನಿಷ್ ಆಕ್ರಮಣಕಾರರಿಂದ ತಪ್ಪಿಸಿಕೊಂಡ ಇಂಡಿಯನ್ ಎಂದೇ ಕರೆಯಲ್ಪಡುವ ಅಮೆರಿಕದ ಮೂಲನಿವಾಸಿ ಇಲ್ಲಿ ರಕ್ಷಣೆ ಪಡೆದಿರಬಹುದು. ಇದೊಂದು ಅತೀಂದ್ರಿಯ(ಮಿಸ್ಟಿಕಲ್) ಜಾಗ್ರತವಾಗಿರುವ ಪ್ರದೇಶವೂ ಹೌದೆನ್ನಲಾಗಿದೆ.

ಹಿಂದಿನ ಶೋಧನೆಗಳು:
1920ರವರೆಗೆ ಹಲವು ಸಾಹಸಿ ಶೋಧಕರು ಶ್ವೇತ ನಗರಿ ಹುಡುಕಿಕೊಂಡು ಹೋಗಿದ್ದರೂ ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿರಲಿಲ್ಲ. ಅದಾಗಿ 20 ವರ್ಷಗಳ ಬಳಿಕ, 1940ರಲ್ಲಿ ಥಿಯೊಡೊರ್ ಮೊರ್ಡೆ ಈ ನಗರಕ್ಕೆ ಹೋಗಿ ಸಾವಿರಾರು ಪ್ರಾಚೀನ ಸಾಧನಗಳೊಂದಿಗೆ ಮರಳಿದ್ದಾಗಿ ಹೇಳಿಕೊಂಡಿದ್ದರು. ಆಗ ಸ್ಥಳೀಯ ಜನರ ಜತೆ ಮಾತನಾಡಿದಾಗ, ಇಲ್ಲೊಂದು ಬೃಹತ್ ವಾನರ ದೇವತೆಯ ಪ್ರತಿಮೆ ಹುಗಿದು ಹೋಗಿದೆ ಎಂದು ಹೇಳಿದ್ದರು. ಆದರೆ, ಆತ ನಗರ ಇರುವ ಜಾಗ ಯಾವುದು ಎಂಬುದರ ಮಾಹಿತಿ ನೀಡಲು ನಿರಾಕರಿಸಿದ್ದರು. ಇದಕ್ಕೆ ಕಾರಣ ಲೂಟಿಕೋರರು ದಾಳಿ ಮಾಡಿ ವಸ್ತುಗಳನ್ನು ಕೊಳ್ಳೆ ಹೊಡೆಯಬಹುದು ಎಂಬ ಭಯಕ್ಕೆ ಹೇಳಲಿಲ್ಲ. ಆ ಬಳಿಕ ಅವರು ಅತ್ಯಂತ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರೊಂದಿಗೆ ಆ ಮಾಹಿತಿಯೂ ಅಳಿದು ಹೋಯಿತು. ವಾನರ ದೇವತಾ ಮೂರ್ತಿ ಇರುವ ಜಾಗ ಯಾವುದು ಎಂಬುದು ಯಾರಿಗೂ ತಿಳಿಯಲೇ ಇಲ್ಲ.


----------------------
* ಇತ್ತೀಚೆಗೆ, ಸಾಕ್ಷೃಚಿತ್ರಗಳ ನಿರ್ಮಾತೃಗಳಾದ ಸ್ಟೀವ್ ಎಲ್ಕಿನ್ಸ್ ಮತ್ತು ಬಿಲ್ ಬೆನ್ನೆನ್‌ಸನ್ ಅವರು ಅಳಿದು ಹೋದ ನಗರದ ಪತ್ತೆ ಕಾರ್ಯದಲ್ಲಿ ತೊಡಗಿದರು. ಅಗ್ನಿಮುಖ ಪರ್ವತದ ಬಾಯಿಯಂತಹ ಕಣಿವೆಯನ್ನು ಕಂಡು ಹಿಡಿದರು. ಇದರ ಸುತ್ತಲೂ ಕಡಿದಾದ ಪರ್ವತಗಳಿದ್ದವು. ಇದೇ ಸ್ಥಳ ಎಂಬುದು ಅವರಿಗೆ ಮನದಟ್ಟಾಯಿತು.