ಭಾನುವಾರ, ಅಕ್ಟೋಬರ್ 18, 2015


ದೇಹ ತೊರೆದ ಆ ಏಳು ದಿನಗಳು 
ಹುಟ್ಟಿನ ಮೊದಲು ಎಲ್ಲಿದ್ದೆವು ಮತ್ತು ಸಾವಿನ ಬಳಿಕ ಎಲ್ಲಿಗೆ ಹೋಗುತ್ತೇವೆ ಎಂಬ ಪ್ರಶ್ನೆಗಳ ಜತೆಗೆ, ಸ್ವರ್ಗ- ನರಕಗಳ ಬಗ್ಗೆಯೂ ಸಾಕಷ್ಟು ಜಿಜ್ಞಾಸೆ ನಡೆದೇ ಇದೆ. ಸ್ವರ್ಗ ಮತ್ತು ನರಕ ಎಂಬುದಿಲ್ಲ. ಎಲ್ಲವೂ ಇಲ್ಲೇ ಇದೆ, ಒಳ್ಳೆಯದನ್ನು ಮಾಡುವುದೇ ಸ್ವರ್ಗ, ಕೆಟ್ಟದ್ದು ನರಕ ಎನ್ನುವವರೂ ಇದ್ದಾರೆ.  ಸ್ವರ್ಗ ಅಥವಾ ಅಂತಹದ್ದೊಂದು ಲೋಕಕ್ಕೆ ಪಯಣಿಸಿ ಬಂದಿದ್ದಾಗಿ ಒಬ್ಬರು ಹೇಳಿಕೊಂಡಿದ್ದಾರೆ !  ಇಂತಹದ್ದೊಂದು ಅಚ್ಚರಿ ಸಂಗತಿ ಹೇಳಿರುವವರು ಒಬ್ಬರು ವಿಜ್ಞಾನಿ. ಸ್ವರ್ಗದಂತಹ ಲೋಕಕ್ಕೆ ಪಯಣಿಸಿದ್ದು ಮಾತ್ರವಲ್ಲ, ಅಲ್ಲಿ ಒಡಹುಟ್ಟಿದ ಸೋದರಿಯನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ರೀತಿ ಹೇಳಿರುವವರು ಹಾರ್ವರ್ಡ್ ವಿಶ್ವವಿದ್ಯಾಲಯದ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಮೆದುಳು ಮತ್ತು ಮನೋ ವಿಜ್ಞಾನದ ಬಗ್ಗೆ ಪಾಠ ಮಾಡುವ ಡಾ ಎಬೆನ್ ಅಲೆಕ್ಸಾಂಡರ್. ಅವರು ತಮ್ಮ ದೇಹಾತೀತ ಅನುಭವ ಮತ್ತು ಸ್ವರ್ಗದಂತಹ ಬೇರೊಂದು ಲೋಕಕ್ಕೆ ಪಯಣಿಸಿದ ಬಗ್ಗೆ ತಮ್ಮ ಕೃತಿಯಲ್ಲಿ Proof of Heaven ದಲ್ಲಿ ವಿವರಿಸಿದ್ದಾರೆ.

ಎಬೆನ್ ಸ್ವರ್ಗಾರೋಹಣದ ಅನುಭವ ಸಂಕ್ಷಿಪ್ತ ವಿವರ ಹೀಗಿದೆ- 
‘ನಾನು ಬಾಲಕನಿದ್ದಾಗಲೇ ವೈದ್ಯರೊಬ್ಬರು ನನ್ನನ್ನು ದತ್ತು ತೆಗೆದುಕೊಂಡರು. ನನ್ನ ಕುಟುಂಬದ ಬಗ್ಗೆ ಏನೊಂದೂ ನೆನಪಿರಲಿಲ್ಲ. ನನಗೊಬ್ಬ ಒಡಹುಟ್ಟಿದ ತಂಗಿ ಇದ್ದಳು ಎಂಬುದೂ ಗೊತ್ತಿರಲಿಲ್ಲ. ನಾನು ಬೆಳೆದು  ದೊಡ್ಡವನಾದ ಬಳಿಕ ಆ ತಂಗಿಗಾಗಿ ಹುಡುಕಾಟ ನಡೆಸಿದಾಗ, ಆಕೆ ಮೃತಪಟ್ಟಿದ್ದು ಬೆಳಕಿಗೆ ಬಂತು. ಆದರೆ, ಆಕೆಯನ್ನು  ಸ್ವರ್ಗದಂತಹ ಲೋಕದಲ್ಲಿ ಭೇಟಿಯಾದೆ ಎಂದರೆ ನಂಬುತ್ತೀರಾ!'
ನಾನೊಬ್ಬ ವಿಜ್ಞಾನಿ. ನನ್ನ ಜೀವಮಾನದ ಬಹುತೇಕ ವರ್ಷಗಳು ಮಿದುಳಿನ ಚಟುವಟಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಾ ಬಂದಿದ್ದೇನೆ. ನನ್ನನ್ನು ದತ್ತು ತೆಗೆದುಕೊಂಡ ತಂದೆ ಕೂಡ ನ್ಯೂರೋ ಸರ್ಜನ್. ಅವರು ನಡೆದ ದಾರಿಯಲ್ಲಿ ನಾನು ಹೆಜ್ಜೆ ಇಟ್ಟು ನಾನೂ ನ್ಯೂರೋ ಸರ್ಜನ್ ಆದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಬ್ರೇನ್ ಸೈನ್ಸ್ ಅಂದರೆ ನರ ವಿಜ್ಞಾನದ ಬೋಧಕನಾಗಿಯೂ ಕಾರ್ಯ ನಿರ್ವಹಿಸಿದೆ. ಕ್ರೈಸ್ತನಾಗಿದ್ದ ನಾನು, ಯಾರಾದರೂ ಅಧ್ಯಾತ್ಮದ ಅನುಭವ ಆಗಿದೆ ಎಂದು ಹೇಳಿಕೊಳ್ಳಲು ಬಂದರೆ ನಂಬುತ್ತಿರಲಿಲ್ಲ. ಅಂತಹ ವ್ಯಕ್ತಿಗಳನ್ನು ಸಂಶಯದಿಂದ ನೋಡುತ್ತಿದ್ದೆ. ದೇಹಾತೀತ ಪಯಣದ ಅನುಭವ, ಅತಿಮಾನುಷರು ಅಥವಾ ದೇವಧೂತರನ್ನು ಕಂಡಿದ್ದೇನೆ ಎಂದು ಹೇಳಿದರೆ, ಅವರು ಮಿದುಳಿನ ಆಘಾತಕ್ಕೆ ಸಿಲುಕಿ ಭ್ರಾಂತಿಗೆ ಒಳಗಾಗಿದ್ದಾರೆ ಎಂಬ ನಿರ್ಣಯಕ್ಕೆ ಬರುತ್ತಿದ್ದೆ.
ಆದರೆ, ಆರು ವರ್ಷಗಳ ಹಿಂದೆ ನನ್ನ ತಥಾಕಥಿತ  ‘ವೈಜ್ಞಾನಿಕ ಮನೋಭಾವ’ ಬುಡಮೇಲಾಗುವ ಪ್ರಸಂಗ ನಡೆಯಿತು. ನಿಜಕ್ಕೂ ನಾಟಕೀಯ ಬೆಳವಣಿಗೆ ಎಂದೇ ಹೇಳಬೇಕು. ಒಂದು ದಿನ ಬೆಳಗ್ಗೆ ಏಳುವಾಗ ವಿಪರೀತ ತಲೆ ನೋವು. ಅದು ಎಷ್ಟು ತೀವ್ರವಾಗಿತ್ತು ಎಂದರೆ, ಕೆಲವೇ ಗಂಟೆಗಳಲ್ಲಿ ಕೋಮಾ ಸ್ಥಿತಿ ತಲುಪಿದ್ದೆ. ಮಿದುಳಿನ ನಿಯೋಕಾರ್ಟೆಕ್ಸ್ ಭಾಗ ಕಾರ್ಯ ಸ್ಥಗಿತಗೊಳಿಸಿತ್ತು. ಆಲೋಚನಾ ಪ್ರಕ್ರಿಯೆಯ ಮೂಲಕ ಮಾನವ ಎನಿಸಿಕೊಳ್ಳಲು ಮತ್ತು ಇತರ ಜೀವಿಗಳಿಗಿಂತ ಭಿನ್ನ ಎನಿಸಿಕೊಳ್ಳಲು  ನಿಯೋಕಾರ್ಟೆಕ್ಸ್ ಕಾರಣ.

ಈ ಸಂದರ್ಭದಲ್ಲಿ ನಾನು ವರ್ಜಿನಿಯಾದ ಲಿಂಚ್‌ಬರ್ಗ್ ಜನರಲ್ ಹಾಸ್ಪಿಟಲ್‌ನಲ್ಲಿ ವೈದ್ಯನಾಗಿದ್ದೆ. ಕೋಮಾಗೆ ಹೋದ ನನ್ನನ್ನು ತಕ್ಷಣವೇ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು. ಇದು ಮೆನಿಂಜೈಟಿಸ್ ಅಥವಾ ಮಿದುಳ್ಪೊರೆಯುರಿತಕ್ಕೆ ತುತ್ತಾಗಿದ್ದೇನೆ ಎಂದು ವೈದ್ಯರು ಅಭಿಪ್ರಾಯಪಟ್ಟರು. ಅತ್ಯಂತ ಅಪರೂಪದ ಬ್ಯಾಕ್ಟೀರಿಯಾ ‘ಇ ಕೊಲಿ’ ನನ್ನ ಬೆನ್ನುಹುರಿಯ ದ್ರವಕ್ಕೆ ಸೇರಿಕೊಂಡು ಅದು ಮಿದುಳನ್ನು ತಿಂದು ಹಾಕಲಾರಂಭಿಸಿದೆ. ಬದುಕುಳಿಯುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ವೈದ್ಯರು ಷರ ಬರೆದರು.
ಆಗ ಅತ್ಯಂತ ಗಾಢವಾದ ಕೋಮಾದಲ್ಲಿದ್ದೆ. ಒಂದು ರೀತಿಯಲ್ಲಿ ಸಸ್ಯಾವಸ್ಥೆಯಲ್ಲಿದ್ದೆ (vegetative state ). ಮಿದುಳು ಕಾರ್ಯವನ್ನು ನಿಲ್ಲಿಸಿತ್ತು. ಪ್ರಜ್ಞಾವಸ್ಥೆಯೂ ಇರಲಿಲ್ಲ ಎಂಬುದನ್ನು ಸ್ಕ್ಯಾನಿಂಗ್ ದಾಖಲಿಸಿತ್ತು. ಆದರೆ, ಆತ್ಮಸ್ಥ ನಾಗಿದ್ದೆ. ಇದು ನಾವು ಪ್ರತಿಪಾದಿಸಿಕೊಂಡು ಬಂದ ವಿಜ್ಞಾನದ ನಿಯಮಗಳಿಗೆ ಈ ಸಂಗತಿ ಹೊರತಾದುದಾಗಿತ್ತು.
 ಏಳು ದಿನಗಳ ಕಾಲ ನನ್ನಿಂದ ಯಾವ ಪ್ರತಿಕ್ರಿಯೆಯೂ ಇರಲಿಲ್ಲ. ನನ್ನ ಪ್ರಜ್ಞೆ (Consciousness ) ವಿವಿಧ ಲೋಕಗಳನ್ನು ದಾಟಿ ಪ್ರಯಾಣ ಬೆಳೆಸಿತ್ತು. ಈ ಲೋಕಗಳು ಒಂದಕ್ಕಿಂತ ಮತ್ತೊಂದು ಅತ್ಯದ್ಭುತವಾಗಿಯೂ, ಭೌತಿಕ ಜಗತ್ತಿಗಿಂತ ಭಿನ್ನವಾಗಿದ್ದವು. ಮೊದಲೆಲ್ಲ ಇಂತಹದ್ದನ್ನು ಯಾರಾದರೂ ಪ್ರಸ್ತಾಪಿಸಿದ್ದರೆ, ಇವೆಲ್ಲ ಬುರುಡೆ ಮತ್ತು ಅಸಂಭವ ಎಂದು ತಳ್ಳಿ ಹಾಕುತ್ತಿದೆ.

ಇತರ ಅನುಭವಕ್ಕಿಂತ ನನ್ನ ಅನುಭವ ಭಿನ್ನ. ನನ್ನ ಪ್ರಕರಣದಲ್ಲಿ ಮಿದುಳಿನ ಕಾರ್ಟೆಕ್ಸ್ ಸಂಪೂರ್ಣ ಸ್ಥಗಿತಗೊಂಡಿದ್ದ ಸ್ಥಿತಿಯಲ್ಲಿ ಸ್ವರ್ಗದಂತಹ ಆಯಾಮದಲ್ಲಿ ಪಯಣಿಸಿದ್ದು. ಮಿದುಳಿನ ಸ್ಥಗಿತಗೊಂಡ ಸ್ಥಿತಿಯನ್ನು ನಿರಂತರ ನಿಗಾವಹಿಸಿದ್ದು ವೈಜ್ಞಾನಿಕವಾಗಿ ದಾಖಲೆಯಾಗಿದೆ. ನನ್ನ ಅನುಭವನ್ನು ಒಪ್ಪಲು ವಿಜ್ಞಾನಿಗಳು ತಯಾರಿರಲಿಲ್ಲ.
ನಿಜಕ್ಕೂ ಆ  ದಿನಗಳು ಏನಾಗಿದ್ದವು? ಇದು ನಿಜಕ್ಕೂ ಕುತೂಹಲಕಾರಿ. ಕೋಮಾಗೆ ಜಾರಿದ ಬಳಿಕ ನಾನು ಅತ್ಯಂತ ಪುರಾತನ, ಆದಿ ಸ್ಥಿತಿಯಲ್ಲಿರುವ ಅನುಭವವಾಯಿತು. ಭೂಮಿಯಡಿ ಹುಗಿದು ಹೋದ ಅನುಭವ. ಅದು ನಮ್ಮ ಸಾಮಾನ್ಯ ಭೂಮಿಯಂತಿರಲಿಲ್ಲ ಎಂಬುದು ಅರಿವಿಗೆ ಬಂತು. ಅಲ್ಲಿ ನನ್ನನ್ನು ಹೊರತುಪಡಿಸಿ ಬೇರೇನೇನೋ ಅಸ್ತಿತ್ವದಲ್ಲಿ ಇದ್ದದ್ದು ಕಂಡಿತು ಮತ್ತು ಕೇಳಿತು. ಅವುಗಳಲ್ಲಿ ಕೆಲವು ಭಯ ಹುಟ್ಟಿಸುವಂತಹುದ್ದಾಗಿದ್ದರೆ ಮತ್ತೆ ಕೆಲವು ಪರಿಚಿತ ಎನಿಸುವಂತಹದ್ದಾಗಿದ್ದವು. ನಾನು ಈ ಆದಿಕಾಲದ ಸ್ಥಿತಿಯ ಮಬ್ಬಿನ ಭಾಗವಾಗಿದ್ದೇನೆ  ಎಂದೆನಿಸಿತು. ಇದೇನು ನರಕವೇ? ಎಂದು ಕೇಳಿಕೊಂಡೆ. ಇರದು ಅಂದುಕೊಂಡೆ. ಅಲ್ಲಿನ ವಾತಾವರಣ ಹಾಗಿರಲಿಲ್ಲ.

ಸಾಕಷ್ಟು ಸಮಯ ಹೀಗೆಯೇ ಕಳೆದಿತ್ತು. ಎಷ್ಟು ಸಮಯ ಕಳೆಯಿತು ಎಂಬುದು ಮಾತ್ರ ಗೊತ್ತಾಗಲಿಲ್ಲ. ಇದ್ದಕ್ಕಿದ್ದ ಹಾಗೆ, ಪ್ರಜ್ವಲಿಸುವ ಬೆಳಕು ಮೇಲಿನಿಂದ ಇಳಿದು ಬಂದಿತು. ನವಿರಾದ ಬಂಗಾರ ಮತ್ತು ಬೆಳ್ಳಿಯ ಬೆಳಕಿನ ನೂಲಿನಂತೆ ಪ್ರಕಾಶ ರೇಖೆಗಳನ್ನು ಅದು ಹೊರಸೂಸುತ್ತಿತ್ತು. ಅದು ಗೋಳದಂತಹ ಬೆಳಕಿನ ಅಸ್ತಿತ್ವ. ಸುಂದರವಾಗಿತ್ತು. ಮಧುರ ಸಂಗೀತವೂ ತೇಲಿ ಬಂದಿತ್ತು.

 ಇದಕ್ಕಿದ್ದಂತೆ ಬೆಳಕು ಸೀಳಿಕೊಂಡಿತು. ಹಾಗೆ ಸೀಳಿದ ಜಾಗದೊಳಗಿಂದ ಒಳಕ್ಕೆ ಪ್ರವೇಶ ಮಾಡಿದಂತೆ ಭಾಸವಾಯಿತು. ಇನ್ನು ಒಳಗೆ ಹೋದ ಬಳಿಕ ಹಚ್ಚ ಹಸಿರಿನಿಂದ ಕಂಗೊಳಿಸುವ ವಿಶಾಲ ಕಣಿವೆ ಕಾಣಿಸಿತು. ಸ್ಪಟಿಕದ ಕೊಳಕ್ಕೆ ಜಲಪಾತದ ಧಾರೆ, ಗುಲಾಬಿ ಮತ್ತು ಬಿಳಿ ಬಣ್ಣದ ಗೊಂಚಲಿನ ಗಿಡಗಳು. ಅದರ ಹಿಂದೆ ದಟ್ಟ ಕಪ್ಪು ಬಣ್ಣದ ಆಕಾಶ. ಇವೆಲ್ಲ ಅಸ್ಪಷ್ಟವಾಗಿರಲಿಲ್ಲ. ಎಲ್ಲವೂ ಸಜೀವ ಮತ್ತು  ನಿಚ್ಚಳವಾಗಿತ್ತು. ಕಣ್ಣು ಕೋರೈಸುವ ಸೂರ್ಯನ ಕಿರಣದಂತಹ ಕಿರಣಗಳು ತುಂಬಿತ್ತು. ಅಲ್ಲಿ ಮರಗಳು, ಹೊಲ, ಪ್ರಾಣಿ ಮತ್ತು ಮನುಷ್ಯರಿದ್ದರು. ನೀರು, ಹರಿಯುವ ನದಿ, ಮಳೆಯೂ ಇತ್ತು. ನೀರಿನಿಂದ ಮಂಜಿನ ಹಬೆ ಏಳುತ್ತಿತ್ತು. ಭೂಮಿ ಎಂದೂ ಇಷ್ಟು ಸುಂದರವಾಗಿದ್ದುದನ್ನು ನಾನು ನೋಡಿಲ್ಲ. ಇಲ್ಲಿ ಎಲ್ಲವೂ ಪರಸ್ಪರ ಬೇರೆ- ಬೇರೆ ಎಂಬ ಭಾವ ಇರಲಿಲ್ಲ. ಏಕಾತ್ಮಭಾವವಿತ್ತು. ಅನಂತತೆ (Infinity) ವ್ಯಾಪಕ. 
ಇದೇ ವೇಳೆಗೆ ಭೂಮಿಗೆ ಮರಳಿದ್ದೆ. ಕೋಮಾದಲ್ಲಿ ಏಳು ದಿನಗಳು ಆಗಿತ್ತು. ದೇಹದಲ್ಲಿ ಚೇತರಿಕೆ ಕಂಡಿರಲಿಲ್ಲ. ಜೀವ ರಕ್ಷಕ ಮುಂದುವರೆಸಬೇಕೆ ಬೇಡವೇ ಎಂಬ ಬಗ್ಗೆ ವೈದ್ಯರು ತಮ್ಮ ತಮ್ಮಲ್ಲೇ ಚರ್ಚಿಸುತ್ತಿದ್ದರು. ಪ್ರಜ್ಞೆಯು ಮರಳಿತು. ಕಣ್ಣುಗಳನ್ನು ತೆರೆದೆ.
ಇವೆಲ್ಲ ಅನುಭವ ಆಧುನಿಕ ವೈದ್ಯಕೀಯ ಪರಿಭಾಷೆ ಮತ್ತು ಗ್ರಹಿಕೆಗೆ ಮೀರಿದ್ದು.

‘ಓಂ’ಕಾರದ ಕಂಪನ

ಗಸದ ಮೇಲೆ ಅನಂತ ವಿಶ್ವವಿತ್ತು. ಅದನ್ನು ಪ್ರಭಾವಲಯ ಎನ್ನಬಹುದು. ಅದರ ಮಧ್ಯಬಿಂದು ತಲುವರೆಗೆ ಆರೋಹಣಗೊಂಡೆ. ಅದು ಅತ್ಯಂತ ಆಳವಾದ ದಿವ್ಯ ದೈವಿಕ ಅನುಭವದ ತಾಣವಾಗಿತ್ತು. ಶಾಂತಿ ಮತ್ತು ಶುದ್ಧ ಪ್ರೀತಿಯ ಪ್ರವಾಹ ಅಲ್ಲಿತ್ತು. ಅಲ್ಲಿ ಅನಂತ ದಿವ್ಯ ಶಕ್ತಿಯ ಮುಖಾಮುಖಿ ಆಯಿತು. ಅಲ್ಲಿಂದ ಹೊಮ್ಮುತ್ತಿದ್ದ ಶಬ್ದ ಮತ್ತು ಕಂಪನ ‘ಓಂ’ ಎಂದಾಗಿತ್ತು. ಇಡೀ ಲೋಕವೇ ಆ ಕಂಪನ ಮತ್ತು  ನಾದದಿಂದ ಕೂಡಿತ್ತು. ಈ ಪಯಣದ ಉದ್ದಕ್ಕೂ ನನಗೊಬ್ಬಳು ಮಾರ್ಗದರ್ಶಿ ಇದ್ದಳು. ಆಕೆ ಅಪ್ರತಿಮ ಸೌಂದರ್ಯವತಿ. ಆ ಮಹಿಳೆಯನ್ನು ಹಿಂದೆಂದೂ ಕಂಡಿರಲಿಲ್ಲ. ಆಕೆಯ ಉಪಸ್ಥಿತಿಯಿಂದಲೇ ನನ್ನ ಹೃದಯ ಗುಣಮುಖವಾಗಿತ್ತು. ಇದರಿಂದ ನಾನು ಪರಿಪೂರ್ಣ ಎನಿಸಿತು. ಆ ಮುಖವನ್ನು ಮರೆಯಲು ಸಾಧ್ಯವಿಲ್ಲ. ಆಕೆ ಹೇಳಿದ ಮಾತುಗಳು ಇನ್ನೂ ಕಿವಿಯಲ್ಲಿ ಗುಂಯ್‌ಗುಡುತ್ತಿವೆ. 

''ಕೋಮಾದಿಂದ ಹೊರ ಬಂದು 4 ತಿಂಗಳ ಬಳಿಕ ಮೇಲ್‌ನಲ್ಲಿ ಒಂದು ಛಾಯಾಚಿತ್ರ ಬಂದಿತು.  ಸಂಬಂಧಿಕರೊಬ್ಬರು ಕಳುಹಿಸಿದ ಚಿತ್ರ. ತೀರಿ ಹೋಗಿದ್ದ ನನ್ನ ಒಡ ಹುಟ್ಟಿದ ತಂಗಿಯ ಚಿತ್ರ ಎಂಬ ಮಾಹಿತಿ ಅದರಲ್ಲಿತ್ತು. ಅಚ್ಚರಿಯ ಸಂಗತಿ ಎಂದರೆ, ಚಿತ್ರದಲ್ಲಿದ್ದ ಬಾಲಕಿಯ ಚಿತ್ರಕ್ಕೂ,  ಸ್ವರ್ಗದಂತಹ ಲೋಕದಲ್ಲಿ ಮಾರ್ಗದರ್ಶನ ಮಾಡಿದ ಸುಂದರ ರೆಕ್ಕೆಗಳನ್ನು ಹೊಂದಿದ್ದ ಯುವತಿಯ ಮುಖಕ್ಕೂ ಸಾಮ್ಯತೆ ಇತ್ತು. ಸೋದರಿಯೇ ಆಗಿದ್ದಳು.

1 ಕಾಮೆಂಟ್‌: