ಬುಧವಾರ, ಅಕ್ಟೋಬರ್ 21, 2015

ಸಾವಿರ ವರ್ಷದ ಧ್ಯಾನಸ್ಥ ಸ್ಥಿತಿಯ ಗುರುವಿನ ‘ಮಮ್ಮಿ’
ಪ್ರತಿಮೆಯೊಳಗೆ ಬೌದ್ಧ ಗುರು
ಸಾವಿರ ವರ್ಷಗಳ ಹಿಂದಿನ ಬೌದ್ಧ ಸನ್ಯಾಸಿ ಪ್ರತಿಮೆ ರೂಪಕ್ಕಿಳಿದ ರೋಚಕ ಕಥೆ ಇದು.  ಗಾಢ ಮತ್ತು ಉನ್ನತ ಧ್ಯಾನಸ್ಥ ಸ್ಥಿತಿಯ ಸನ್ಯಾಸಿ ಬುದ್ಧನ ವಿಗ್ರಹದಲ್ಲಿ ಸೇರಿಕೊಂಡಿದ್ದಾದರೂ  ಹೇಗೆ? ಪ್ರತಿಮೆ ರೂಪದಲ್ಲಿ ಮಮ್ಮಿಕರಣಗೊಂಡಿದ್ದಾದರೂ ಹೇಗೆ? ಇಂತಹ ಹಲವು ಪ್ರಶ್ನೆಗೆಳಿಗೆ ಈಗ ಉತ್ತರ ಸಿಕ್ಕಿದೆ. ಆಧುನಿಕ ಸಿ.ಟಿ ಸ್ಕ್ಯಾನ್  ಬೌದ್ಧ ಸನ್ಯಾಸಿಯ ಮಮ್ಮಿಯ ಹಲವು ರಹಸ್ಯಗಳನ್ನು ಅನಾವರಣಗೊಳಿಸಿದೆ.
ಈ ಪ್ರತಿಮೆ ಚೀನಾದ್ದು. ಹಾಲೆಂಡ್, ಜರ್ಮನಿ, ಸ್ವಿರ್ಜಲೆಂಡ್ ಮತ್ತು ಹಂಗೆರಿ ದೇಶಗಳಲ್ಲಿ ಜಂಟಿ ಪ್ರದರ್ಶನಕ್ಕೆಂದು ಒಯ್ಯಲಾಗಿತ್ತು. 
ಮಮ್ಮಿ ಎಂದು ಗೊತ್ತಾಗುತ್ತಿದ್ದಂತೆ ತಜ್ಞರು ಸಿ.ಟಿ  ಸ್ಕ್ಯಾನ್  ಮತ್ತು ಎಂಡೋಸ್ಕೊಪಿಗೊಳಪಡಿಸಿದರು. ಈ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆ, ಇದರ  ದರ್ಶನಕ್ಕಾಗಿ  ಜನ ಮುಗಿ ಬಿದ್ದರು . 2014 ರಲ್ಲಿ  ಹಾಲೆಂಡ್‌ನ ಡೆರೆಂಟ್ ಮ್ಯೂಸಿಯಂನಲ್ಲಿ ಏಳು ತಿಂಗಳ ಪ್ರದರ್ಶನದ ಬಳಿಕ ತಜ್ಞರು ಪ್ರತಿಮೆಯೊಳಗೆ ಹುದುಗಿದ್ದ  ಸನ್ಯಾಸಿಯ ದೇಹದೊಳಗಿನ ಅಂಗಾಂಗಗಳನ್ನು  ವಿಶ್ಲೇಷಣೆಗೊಳಪಡಿಸಲು ನಿರ್ಧರಿಸಿದರು.
ಸಿ.ಟಿ  ಸ್ಕ್ಯಾನ್  ಮಾಡಿದಾಗ ತಜ್ಞರಿಗೆ ಅಚ್ಚರಿ ಕಾದಿತ್ತು. ದೇಹದೊಳಗೆ ಹಲವು ಅಂಗಗಳೇ ಇರಲ್ಲಿಲ್ಲ .
ಅಷ್ಟಕ್ಕೂ  ಸ್ಕ್ಯಾನ್ ಗೆ ಮುಂದಾಗಿದ್ದು ಬೇರೆಯೇ  ಕಾರಣಕ್ಕೆ  ಪ್ರತಿಮೆಯ ಮಾಲಿಕ ಅದರ ಆಳೆತ್ತರದ ಪ್ರತಿಮೆ ಪುನರ್ ನಿರ್ಮಿಸಲು ನಿರ್ಧರಿಸಿದ್ದ.   
ಇದರ ಒಳ ರಚನೆ ಪುನರ್ ಸೃಷ್ಟಿಗೆ  3ಡಿ  ಸ್ಕ್ಯಾನ್   ಮಾಡಬೇಕಾಯಿತು. ಆಗ ಮಮ್ಮಿಯೊಳಗಿನ ಮಾನವಾಕೃತಿ ಇರುವುದು ಬೆಳಕಿಗೆ ಬಂದಿತು. 1996 ರಲ್ಲಿ ಪ್ರತಿಮೆಯನ್ನು ಚೀನಾದಿಂದ ತಂದಾಗ ಅದು ಮಮ್ಮಿ ಎಂಬುದು ಯಾರಿಗೂ  ಗೊತ್ತಿರಲಿಲ್ಲ. ಹಲವು ವರ್ಷಗಳ ಬಳಿಕ ತಜ್ಞರು ಪ್ರತಿಮೆಯನ್ನು ಸಂರಕ್ಷಿಸುವ ಸಂದರ್ಭದಲ್ಲಿ ಮಮ್ಮಿ ಇರಬಹುದು ಎಂಬುದಾಗಿ ಊಹಿಸಿದ್ದರು. ಪರೀಕ್ಷೆಗೆ ಹೋಗಿರಲಿಲ್ಲ . ಸಿಟಿ ಸ್ಕ್ಯಾನ್  ಬಳಿಕ ಹಾಲೆಂಡ್‌ನ ಮಿಯಾಂಡೆರ್ ಮೆಡಿಕಲ್ ಸೆಂಟರ್‌ನಲ್ಲಿ ಕಳೆದ ವರ್ಷ ಮಮ್ಮಿಯೊಳಗೆ ಪುಟಾಣಿ ಕ್ಯಾಮೆರಾ ತೂರಿಸಿ ಎಂಡೋಸ್ಕೋಪಿ ಪರೀಕ್ಷೆಯನ್ನೂ ನಡೆಸಲಾಯಿತು. ಶ್ವಾಸಕೋಶದ ಭಾಗಕ್ಕೆ ಕ್ಯಾಮೆರಾ ತೆರಳಿ ಚಿತ್ರ ಬಿತ್ತರಿಸಿದಾಗ ಅದನ್ನು ಶ್ವಾಸಕೋಶದ ಅಂಗಾಂಶ ಇರಬಹುದೆಂದು ಭಾವಿಸಲಾಗಿತ್ತು. ಆದರೆ, ಅದು ಅಂಗಾಂಶ ಆಗಿರದೇ, ಚೀನಿ ಬರಹವನ್ನು ಒಳಗೊಂಡ ಸಣ್ಣ ಕಾಗದದ ತುಣುಕುಗಳಾಗಿದ್ದವು.  
ಈ ಪ್ರತಿಮೆಯಲ್ಲಿನ ಸನ್ಯಾಸಿಯ ದೇಹದ ಕುರಿತು ಇನ್ನಷ್ಟು ತನಿಖೆಗಳು ನಡೆಯುತ್ತಿವೆ. ಡಿಎನ್‌ಎ ಪರೀಕ್ಷೆಯೂ ನಡೆಯಲಿದೆ.  2013 ರಲ್ಲಿ ಜರ್ಮನಿಯ ಮನ್ನಿಹೆಮ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪ್ರತಿಮೆಯನ್ನು ಸ್ಕ್ಯಾನ್ ಮಾಡಲಾಗಿತ್ತು.  ಮಮ್ಮೀಕೃತ ಬೌದ್ಧ ಸನ್ಯಾಸಿಯ ದೇಹ ಚೀನಿ ಧ್ಯಾನ ಶಾಲೆಯ ಗುರುವಾಗಿದ್ದ, ಲಿಕ್ವಾನ್ ನದ್ದು ಎಂದು ಭಾವಿಸಲಾಗಿದೆ. ಈತ  ಕ್ರಿ.ಶ 1100 ರ ಅವಧಿಯಲ್ಲಿ ಗಾಢ ಧ್ಯಾನದ ಸ್ಥಿತಿಯಲ್ಲೇ ದೇಹ ತ್ಯಾಗ ಮಾಡಿದ್ದನ್ನಲಾಗಿದೆ.
ಮಮ್ಮೀಕೃತ ದೇಹದ ಕೆಳಗೆ 14 ನೇ ಶತಮಾನದ ಬಟ್ಟೆಯ ಸುರಳಿಯೂ  ಸಿಕ್ಕಿದೆ. ಚೀನಿ ಭಾಷೆಯಲ್ಲಿರುವ ಮಾಹಿತಿಯ ಸುರಳಿ ಭಿಕ್ಷುವಿನ ಬಗ್ಗೆ ಹೆಚ್ಚಿನ ಮಾಹಿತಿಯ ಸುಳಿವನ್ನು ಹೊಂದಿರಬಹುದು. ಆರಂಭದಲ್ಲಿ ಸನ್ಯಾಸಿಯ ಸಂಸ್ಕರಿಸಿದ ದೇಹವನ್ನೇ ಪೂಜಿಸುತ್ತಿದ್ದಿರಬಹುದು. ಆ ಬಳಿಕ ಅಂದರೆ 14 ನೇ ಶತಮಾನದಲ್ಲಿ ಅದನ್ನು ಪ್ರತಿಮೆ ರೂಪಕ್ಕೆ ರೂಪಾಂತರಿಸಿರಬಹುದು ಎಂದು ವಾನ್ ವಿಲ್‌ಸ್ಟೆರ್ನ್ ಹೇಳಿದ್ದಾರೆ.
ಇತ್ತೀಚೆಗೆ ಮಂಗೋಲಿಯಾದಲ್ಲಿ ಸಿಕ್ಕ 200 ವರ್ಷಗಳ ಹಳೆಯ ಬೌದ್ಧ ಭಿಕ್ಷುವಿನ ಪದ್ಮಾಸನದಲ್ಲಿದ್ದ  ಧ್ಯಾನಸ್ಥ ದೇಹ ಪ್ರಚಾರಕ್ಕೆ ಬಂದ ಬಳಿಕ 1000 ವರ್ಷಗಳ ಹಳೆಯ ಮಮ್ಮೀಕೃತ ಭಿಕ್ಷುವಿನ ಬಗ್ಗೆ ಇನ್ನಷ್ಟು ಕುತೂಹಲ ಉಂಟಾಗಿದೆ.
ಧ್ಯಾನದಲ್ಲೇ ಮರಣ:
ಬೌದ್ಧರಲ್ಲಿ ಅದರಲ್ಲೂ ಟಿಬೆಟ್ ಚೀನಾದ ಬೌದ್ಧರು ಮರು ಜನ್ಮದಲ್ಲಿ ನಂಬಿಕೆ ಹೊಂದಿದ್ದಾರೆ. ಸತ್ತ ನಂತರ ಆತ್ಮದ ಎಲ್ಲಿಗೆ ಹೋಗುತ್ತದೆ ಮತ್ತು ಅದು ಮರಳಿ ಹೇಗೆ ಜನ್ಮ ಪಡೆಯುತ್ತದೆ ಎಂಬುದರ ಕುರಿತು ಟಿಬೆಟಿಯನ್ನರು ಪುಸ್ತಕ ಬರೆದಿದ್ದಾರೆ. ಆ ಪೈಕಿ ‘ದಿ ಟಿಬೆಟಿಯನ್ ಬುಕ್ ಆಫ್ ಡೆಡ್’ ಪ್ರಖ್ಯಾತಿ ಪಡೆದಿದೆ. ಹಿಂದೆ ಧ್ಯಾನಸ್ಥ ಸ್ಥಿತಿಯಲ್ಲೇ ಬೌದ್ಧ ಭಿಕ್ಷುಗಳು ದೇಹ ತೊರೆಯುತ್ತಿದ್ದರು. ಧ್ಯಾನದ ವಿಶಿಷ್ಟ ತಂತ್ರದಿಂದ ದೇಹವನ್ನು ಕೆಡದಂತೆ ಉಳಿಸಿಕೊಳ್ಳುವ ಕಲೆಯೂ ಅವರಿಗೆ ಕರಗತವಾಗಿತ್ತು. ಆದರೆ, ಅನುಯಾಯಿಗಳು ಗುರುಗಳು ಮರಳಿ ಬದುಕಬಹುದು ಎಂದು ಮಮ್ಮಿ ರೂಪಕ್ಕೆ ಪರಿವರ್ತಿಸಿರಲಿಕ್ಕೂ ಸಾಕು. ಕೆಡದ ದೇಹವನ್ನು ಪ್ರತಿಮೆರೂಪಕ್ಕೆ ರೂಪಾಂತರಿಸಿ ಪೂಜಿಸುವ ಪದ್ಧತಿಯೂ ಇದ್ದಿರಬಹುದು ಎಂದು ತಜ್ಞರು ಊಹಿಸಿದ್ದಾರೆ.
(Photo by abc news)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ